ಮಂಗಳೂರು: ಗೋವಿನ ಮೇಲೆ ಪ್ರೀತಿಯಿಂದ ಹಲವಾರು ಜನ ಗೋಸೇವೆ ಮಾಡುತ್ತಿರುವುದನ್ನು ನೋಡುತ್ತೇವೆ. ಆದರೆ ಅಪಘಾತದಲ್ಲಿ ಕಾಲು ಮುರಿದುಕೊಂಡಿದ್ದ ಬೀದಿ ಹಸುವನ್ನು ದತ್ತು ಪಡೆದು ಆರೈಕೆ ಮಾಡುತ್ತಿರುವ ಟೆಕ್ಕಿಯೊಬ್ಬರು ತಮ್ಮ ಮಾನವೀಯ ಕಾರ್ಯದಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಹೌದು, ಮಂಗಳೂರಿನ ರಾಣಿ ಅವರು ಬೆಂಗಳೂರಿನ ಐಟಿ ಕಂಪೆನಿಯ ಉದ್ಯೋಗಿ. ಇತರ ಐಟಿ ಉದ್ಯೋಗಿಗಳಂತೆ ಕೆಲಸದ ಬಗ್ಗೆ ಮಾತ್ರ ಗಮನ ನೀಡದೆ ಮೂಕ ಪ್ರಾಣಿಗಳ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ಕೊರೊನಾ ಕಾಲದಲ್ಲಿ ಪಣಂಬೂರಿನಲ್ಲಿ ಅಪಘಾತದಿಂದ ಕಾಲು ಮುರಿದಿದ್ದ ಈ ಹಸುವಿಗೆ ಶುಶ್ರೂಷೆ ನೀಡಿದ ಆ್ಯನಿಮಲ್ ಕೇರ್ ಟ್ರಸ್ಟ್ನವರು ಗಾಯವನ್ನು ಗುಣ ಪಡಿಸಿದ್ದರು.
ಆ ಸಂದರ್ಭದಲ್ಲಿ ರಾಣಿ ವರ್ಕ್ ಫ್ರಂ ಹೋಂ ಕಾರಣದಿಂದ ಬೆಂಗಳೂರಿನಿಂದ ಮಂಗಳೂರಿನ ಮನೆಗೆ ಬಂದಿದ್ದರು. ಈ ವೇಳೆ ರಾಣಿಯವರು ಆ್ಯನಿಮಲ್ ಕೇರ್ ಟ್ರಸ್ಟ್ನವರಿಂದ ಈ ಗೋವನ್ನು ದತ್ತು ಪಡೆದಿದ್ದರು. ಅಂದಿನಿಂದ ಈ ಗೋವು ಈ ಮನೆಯ ಮಗುವೇ ಆಗಿದೆ. ಅದಕ್ಕೆ ಗೌರಿ ಎಂದು ಹೆಸರಿಟ್ಟು ಪ್ರೀತಿಯಿಂದ ಸಾಕುತ್ತಿದ್ದಾರೆ. ಮುರಿದ ಕಾಲಿಗೆ ಕೃತಕ ಕಾಲುಗಳನ್ನು ಮಾಡಿಸಿದ್ದಾರೆ. ಅದರಲ್ಲೂ ಗೋವಿನ ಬೆಳವಣಿಗೆಗೆ ತಕ್ಕಂತೆ ವಿವಿಧ ಮಾದರಿಯ ಕೃತಕ ಕಾಲನ್ನು ಸಹ ಖರೀದಿಸಿದ್ದಾರೆ.
ರಾಣಿ ಅವರು ಮನೆಯ ಎದುರೇ ಗೋವಿಗೆ ಸ್ಥಳ ಮೀಸಲಿಟ್ಟಿದ್ದಾರೆ. ಹಸುವಿಗೆ ಫ್ಯಾನ್ ಕೂಡಾ ಅಳವಡಿಸಿದ್ದಾರೆ. ಮಳೆ ನೀರು ಬೀಳದಂತೆ ತಗಡಿನ ಶೀಟ್ ಅಳವಡಿಸಿದ್ದಾರೆ. ಕಟ್ಟಿಹಾಕದೆ ಗೋವನ್ನು ಸ್ವಚ್ಛಂದವಾಗಿ ವಿಹರಿಸಲು ಬಿಟ್ಟಿದ್ದಾರೆ. ಗೋವಿಗೆ ಮಣ್ಣಗುಡ್ಡೆಯ ಕಾರ್ತಿಕ್ ಎಂಬ ತರಕಾರಿ ವ್ಯಾಪಾರಿ ಉಚಿತವಾಗಿ ನೀಡುವ ತಾಜಾ ತರಕಾರಿಗಳನ್ನೇ ಆಹಾರವಾಗಿ ನೀಡುತ್ತಿರುವುದು ವಿಶೇಷ.
ಆದರೆ ಗೋವಿನ ಇಷ್ಟದ ಬೈಹುಲ್ಲು (ಭತ್ತದ ಹುಲ್ಲು) ಸರಿಯಾಗಿ ಸಿಗದೆ ಇರುವುದು ರಾಣಿ ಅವರಿಗೆ ಬೇಸರ ತಂದಿದೆ. ಈಗ ಎಲ್ಲರೂ ಟ್ರ್ಯಾಕ್ಟರ್ ಬಳಸಿ ಕಟಾವು ಮಾಡುವುದರಿಂದ ಬೈಹುಲ್ಲಿಗೆ ಗ್ರೀಸ್ ಮೆತ್ತಿಕೊಂಡು ಹಸು ಬೈಹುಲ್ಲು ತಿನ್ನೋಲ್ಲ ಅನ್ನುತಾರೆ. ಆದ್ದರಿಂದ ಸೂಡಿ ಬೈಹುಲ್ಲಿನ ಕೊರತೆಯಿದ್ದು, ಈ ಬಗ್ಗೆ ರೈತರು ಗಮನಹರಿಸಬೇಕಿದೆ ಎಂದು ಅವರು ಹೇಳುತ್ತಾರೆ.
ಈ ಗೋವು ರಾಣಿಯವರನ್ನು ಸಂಪೂರ್ಣ ಹಚ್ಚಿಕೊಂಡಿದ್ದು, ಇನ್ನಾರದರೂ ಅವರೊಂದಿಗೆ ಸಲಿಗೆಯಿಂದ ವರ್ತಿಸಿದರೆ ಅವರಿಗೆ ಹಾಯಲು ಹೋಗುತ್ತದೆ. ಮೂರು ವರ್ಷಗಳಿಂದ ಗೋಸೇವೆಯಲ್ಲಿ ನಿರತರಾಗಿರುವ ಇವರು ತಮ್ಮ ಕೆಲಸದ ನಡುವೆಯೂ ಒಂದಷ್ಟು ಸಮಯವನ್ನು ಇದಕ್ಕಾಗಿ ನೀಡುತ್ತಿದ್ದಾರೆ.
ಈ ಬಗ್ಗೆ ಮಾತನಾಡಿದ ರಾಣಿ "ನಾನು ಐಬಿಎಂನಲ್ಲಿ ಕೆಲಸ ಮಾಡುತ್ತಿದ್ದೇನೆ. ಕೋವಿಡ್ ಸಂದರ್ಭದಲ್ಲಿ ನಾನು ವರ್ಕ್ ಫ್ರಂ ಹೋಂ ಕೆಲಸ ಮಾಡುವಾಗ ಅಪಘಾತದಲ್ಲಿ ಗಾಯಗೊಂಡಿದ್ದ ಗೌರಿಯನ್ನು ದತ್ತು ತೆಗೆದುಕೊಂಡಿದ್ದೆ. ಅದಕ್ಕೆ ಕೃತಕ ಕಾಲುಗಳನ್ನು ಮಾಡಿಸಿ ಪ್ರತಿದಿನ ಆರೈಕೆ ಮಾಡುತ್ತಿದ್ದೆ. ಗೌರಿಗೆ ಕೆಲವೊಮ್ಮೆ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ವೈದ್ಯರ ಮೂಲಕ ಚಿಕಿತ್ಸೆ ನೀಡುತ್ತಿದ್ದೇನೆ. ಅದು ನನ್ನನ್ನು ತುಂಬಾ ಪ್ರೀತಿಸುತ್ತಿದೆ. ಅವಳನ್ನು ಕಟ್ಟಿ ಹಾಕುವುದಿಲ್ಲ. ಬೈ ಹುಲ್ಲು ಸಿಗದೆ ಇರುವುದು ಬೇಸರ ತಂದಿದೆ. ಅದರ ಕೃತಕ ಕಾಲಿಗೋಸ್ಕರ ತುಂಬಾ ಪ್ರಯತ್ನ ಪಟ್ಟೆ. ಅದು ಮೊದಲಿಗೆ ನಮ್ಮ ಜೊತೆಗೆ ಹೊಂದಿಕೊಳ್ಳುತ್ತಿರಲಿಲ್ಲ. ಈಗ ಅವಳು(ಗೌರಿ ಹಸು) ನನ್ನ ಜೊತೆಗೆ ತುಂಬಾ ಹೊಂದಿಕೊಂಡಿದ್ದಾಳೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: 2,000 ಸಾವಿರ ವರ್ಷದಷ್ಟು ಹಳೆಯ ದೊಡ್ಡ ಹುಣಸೆ ಮರಕ್ಕೆ ಮತ್ತೆ ಬಂತು ಜೀವಕಳೆ!