ಮಂಗಳೂರು: ವಿವಿಧೆಡೆ ರಾತ್ರಿ ವೇಳೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಹಲವು ಪ್ರಕರಣಗಳ ಆರೋಪಿವೋರ್ವನನ್ನು ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಣ್ಣೂರು ಜಂಕ್ಷನ್ನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಮೂಡುಬಿದಿರೆ ತಾಲೂಕಿನ ಹೊಸಬೆಟ್ಟು ಗ್ರಾಮದ ಬೊಗ್ರಗುಡ್ಡೆಯ ಪ್ರಸಾದ್ ಪೂಜಾರಿ (23) ಬಂಧಿತ ಆರೋಪಿ. ಆರೋಪಿ ವಿರುದ್ಧ ಈಗಾಗಲೇ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಹಾಗೂ ರಾತ್ರಿ ಕನ್ನ ಕಳವು ನಂತಹ ಒಟ್ಟು ಮೂರು ಪ್ರಕರಣಗಳು ದಾಖಲಾಗಿದ್ದವು. 2014ನೇ ಸಾಲಿನಲ್ಲಿ ಆರೋಪಿಗೆ ಕಳ್ಳತನ ಪ್ರಕರಣದಲ್ಲಿ ಶಿಕ್ಷೆಯಾಗಿತ್ತು.
ವೇಣೂರು ಪೊಲೀಸ್ ಠಾಣೆ ಮತ್ತು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದರೋಡೆ ಯತ್ನ ಪ್ರಕರಣ ಪ್ರಸಾದ್ ವಿರುದ್ಧ ದಾಖಲಾಗಿ ತನಿಖೆಯಲ್ಲಿರುತ್ತದೆ.
ಪ್ರಸ್ತುತ ಆರೋಪಿ ಪ್ರಸಾದ್ ಪೂಜಾರಿಯನ್ನು ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಂಗಳೂರು ರೈಲ್ವೆ ಜಂಕ್ಷನ್ ಬಳಿಯಿರುವ ರೈಲ್ವೆ ವಸತಿ ಗೃಹದಲ್ಲಿ ಕಳವು ಪ್ರಕರಣ, ಪಡೀಲ್ ಎಂಬಲ್ಲಿರುವ ಅದ್ವೈತ್ ಜೆ.ಸಿ.ಬಿ. ಶೋರೂಂ ಹಾಗೂ ಯುನೈಟೆಡ್ ಟೊಯೋಟಾ ಶೋರೂಂ ಕಳವು ಪ್ರಕರಣ, ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2 ಅಂಗಡಿಗಳಿಗೆ ಕನ್ನ ಹಾಕಿದ ಪ್ರಕರಣ, ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಎಡಪದವು ಪಂಚಾಯತ್, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಾರಿಪಳ್ಳ ಎಂಬಲ್ಲಿರುವ ಚೌಟಾಸ್ ಗ್ಯಾಸ್ ಏಜೆನ್ಸಿಯಲ್ಲಿನ ಕಳ್ಳತನ ಸೇರಿದಂತೆ ಒಟ್ಟು 7 ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪದಲ್ಲಿ ಬಂಧಿಸಲಾಗಿದೆ.
ಆರೋಪಿಯಿಂದ 3 ಲ್ಯಾಪ್ ಟಾಪ್ಗಳು, 4 ಟ್ಯಾಬ್, 3 ಮೊಬೈಲ್, 2 ಚಿನ್ನದ ಬಳೆ, ಕ್ಯಾಶ್ ಲಾಕರ್, 1 ಕ್ಯಾಮರಾ ಹಾಗೂ ಕೃತ್ಯ ನಡೆಸಲು ಉಪಯೋಗಿಸಿದ ಲಿವರ್, ಟಾರ್ಚ್, ಮಾಸ್ಕ್ ಹಾಗೂ ಕಬ್ಬಿಣದ ರಾಡ್ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿ ಪ್ರಸಾದ್ ಪೂಜಾರಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಒಪ್ಪಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಉಪ-ಪೊಲೀಸ್ ಆಯುಕ್ತರಾದ ಹನುಮಂತರಾಯ, ಲಕ್ಷ್ಮೀ ಗಣೇಶ್ ಹಾಗೂ ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ರಾಮರಾವ್ ಮಾರ್ಗದರ್ಶನದಲ್ಲಿ ಕಂಕನಾಡಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಜಗದೀಶ್ ಆರ್, ಕಾನೂನು ಸುವ್ಯವಸ್ಥೆಯ ಪೊಲೀಸ್ ಉಪ ನಿರೀಕ್ಷಕ ಪ್ರದೀಪ್ ಟಿ. ಆರ್, ಸುದೀಪ್ ಹಾಗೂ ಸಿಬ್ಬಂದಿಯಾದ ಸಂತೋಷ್, ಮದನ್, ವಿನೋದ್, ರಾಜೇಶ್, ನೂತನ್, ಸಂದೀಪ್, ಕಾರ್ತಿಕ್ ಮತ್ತು ಮೇಘರಾಜ್ ಭಾಗವಹಿಸಿದ್ದರು.