ಬೆಳ್ತಂಗಡಿ: ಮುಂಡಾಜೆಯ ಕೃಷಿಕರೊಬ್ಬರು ತಮ್ಮ 5 ಎಕರೆ ಜಾಗದಲ್ಲಿ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಮಡಿದ ಯೋಧರ ಹೆಸರಿನಲ್ಲಿ ಗಿಡಗಳನ್ನು ನೆಡುವ ಅಪೂರ್ವ ಯೋಜನೆ ಹಮ್ಮಿಕೊಂಡಿದ್ದು, ನಿನ್ನೆ ಈ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಮುಂಡಾಜೆಯ ಭಿಡೆ ಮನೆತನದ ದುಂಬೆಟ್ಟು ನಿವಾಸಿ ಸಚಿನ್ ಭಿಡೆ ಕಾರ್ಗಿಲ್ ವಿಜಯ ದಿನದ ನೆನಪಿಗಾಗಿ 800 ವಿವಿಧ ಬಗೆಯ ಗಿಡಗಳನ್ನು ನೆಟ್ಟು, ಅವುಗಳನ್ನು ಪೋಷಿಸಲು ಮುಂದಾಗಿದ್ದಾರೆ. ನಾನು ಚಿಕ್ಕವನಿದ್ದಾಗ ತನ್ನ ತಂದೆ ಗಣೇಶ್ ಭಿಡೆಯವರು ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಯೋಧರ ಕಷ್ಟಗಳನ್ನು ವಿವರಿಸಿ, ಒಂದಿಷ್ಟು ಹಣವನ್ನು ನೀಡಿ ಕಾರ್ಗಿಲ್ ನಿಧಿಗೆ ಮನಿ ಆರ್ಡರ್ ಮೂಲಕ ಜಮಾ ಮಾಡಲು ಹೇಳಿರುವುದು ಈ ಕೆಲಸಕ್ಕೆ ಸ್ಫೂರ್ತಿ ಎಂದು ಹೇಳಿದ್ದಾರೆ.
ಅರಣ್ಯ ಇಲಾಖೆಯ ಮುಂಡಾಜೆ ಕಾಪು ನರ್ಸರಿಯಿಂದ ರಿಯಾಯಿತಿ ದರದಲ್ಲಿ ವಿವಿಧ ಜಾತಿಯ ಗಿಡಗಳನ್ನು ಪಡೆದು ನೆಡಲಾಗುತ್ತಿದೆ. ಉದ್ದೇಶಿತ ಜಾಗಕ್ಕೆ 'ಕಾರ್ಗಿಲ್ ವನ' ಎಂದು ನಾಮಕರಣ ಮಾಡಲಾಗಿದೆ.
ಈ ವೇಳೆ ಬೆಳ್ತಂಗಡಿ ತಾಲೂಕು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕೃಷ್ಣ ಭಟ್, ಗೌರವಾಧ್ಯಕ್ಷ ಎಂ.ವಿ. ಭಟ್, ಮಾಜಿ ಸೈನಿಕರಾದ ಶ್ರೀಕಾಂತ ಗೋರೆ, ಜಗನ್ನಾಥ ಶೆಟ್ಟಿ, ಸುನಿಲ್ ಶೆಣೈ, ಪ್ರಸನ್ನ ಬಿ. ಶಿಶಿಲ, ರಾಮ್ ಭಟ್, ಹರೀಶ್ ರೈ, ಉಮೇಶ್ ಬಂಗೇರ, ಪರಿಸರವಾದಿ ದಿನೇಶ್ ಹೊಳ್ಳ, ಅವಿನಾಶ್ ಭಿಡೆ ಮುಂತಾದವರು ಉಪಸ್ಥಿತರಿದ್ದರು.