ಮಂಗಳೂರು : ಬಹರೇನ್ನಿಂದ ಮಂಗಳೂರಿಗೆ ಬರಬೇಕಿದ್ದ ಇಂಡಿಗೋ ವಿಮಾನ ಬಹರೇನ್ ಹಾಗೂ ಮುಂಬೈಯಲ್ಲಿ ಎದುರಾದ ಸಮಸ್ಯೆಗಳಿಂದ ಎರಡು ದಿನ ವಿಳಂಬವಾಗಿ ಆಗಮಿಸಿರುವ ಘಟನೆ ನಡೆದಿದೆ. ಮಾರ್ಚ್ 20ರಂದು ರಾತ್ರಿ 10.35ರ ಸುಮಾರಿಗೆ ಬಹರೇನ್ನಿಂದ ಮಂಗಳೂರಿಗೆ ಇಂಡಿಗೋ ವಿಮಾನ ಹೊರಡಬೇಕಿತ್ತು. ಆದರೆ ವಿಮಾನದಲ್ಲಿದ್ದ 12 ಪ್ರಯಾಣಿಕರು ಮಾ. 22ರಂದು ರಾತ್ರಿ 11 ಗಂಟೆಗೆ ಮಂಗಳೂರು ತಲುಪಿದ್ದಾರೆ.
ಮಾರ್ಚ್ 20ರಂದು ರಾತ್ರಿ 10.35ರ ಸುಮಾರಿಗೆ ಬಹರೇನ್ನಿಂದ ಮುಂಬೈಗೆ ಇಂಡಿಗೋ ವಿಮಾನ ಹೊರಡಬೇಕಿತ್ತು. ವಿಮಾನದಲ್ಲಿ ಎರಡು ಗಂಟೆ ಪ್ರಯಾಣಿಕರು ಕುಳಿತಿದ್ದು, ಅನಂತರ ವಿಮಾನಕ್ಕೆ ಹಕ್ಕಿ ಡಿಕ್ಕಿಯಾಗಿದೆ ಎಂದು ಹೇಳಿ ಪ್ರಯಾಣಿಕರನ್ನು ಇಳಿಸಿದ್ದಾರೆ. ಬಳಿಕ ವಿಮಾನ ಮಾ.21ರಂದು ರಾತ್ರಿ ಸಂಚಾರ ನಡೆಸುವುದಾಗಿ ಪ್ರಯಾಣಿಕರಿಗೆ ತಿಳಿಸಲಾಗಿತ್ತು.
ಬಳಿಕ ಮರುದಿನ ರಾತ್ರಿ 10.35ಕ್ಕೆ ಹೊರಡಬೇಕಾದ ವಿಮಾನವು ಓರ್ವ ಪ್ರಯಾಣಿಕನಿಗಾಗಿ 2 ಗಂಟೆ ಕಾದು ಬಳಿಕ ತಡವಾಗಿ ಹೊರಟಿದೆ. ಮಾ. 22ರಂದು ಬಹರೇನ್ನಿಂದ ಹೊರಟ ವಿಮಾನ ಮುಂಬೈಗೆ ಬೆಳಗ್ಗೆ 7.30ಕ್ಕೆ ತಲುಪಿದೆ. ಈ ವಿಮಾನವು ಮುಂಬೈಗೆ ಬಂದಾಗ ಮಂಗಳೂರಿಗೆ ಇದ್ದ ಕನೆಕ್ಟಿಂಗ್ ವಿಮಾನ ಅದಾಗಲೇ ಹೊರಟಿತ್ತು. ಹೀಗಾಗಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಬರಬೇಕಿದ್ದ 12 ಪ್ರಯಾಣಿಕರು ಮತ್ತೆ ಗೊಂದಲವನ್ನು ಎದುರಿಸಬೇಕಾಯಿತು. ಬಳಿಕ ರಾತ್ರಿ 8 ಗಂಟೆಯ ವಿಮಾನದಲ್ಲಿ ಈ ಎಲ್ಲಾ ಪ್ರಯಾಣಿಕರು ಮಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ.
ಮಾರ್ಚ್ 20ರಂದು ಬಹರೇನ್ನಿಂದ ಮಂಗಳೂರಿಗೆ ಬರಬೇಕಿದ್ದ ವಿಮಾನದಲ್ಲಿದ್ದ ಮಂಗಳೂರಿನ ಪ್ರಯಾಣಿಕರು ಮಾರ್ಚ್ 22 ರಾತ್ರಿ 11 ಗಂಟೆಗೆ ಮಂಗಳೂರು ತಲುಪುವಂತಾಗಿದೆ. ವಿಮಾನ ಪ್ರಯಾಣದ ವಿಳಂಬದಿಂದ ಪ್ರಯಾಣಿಕರು ಹೈರಾಣಾಗಿದ್ದರು.
ವಿಮಾನ ಪ್ರಯಾಣಿಕ ಮಂಗಳೂರಿನ ಆರ್ ಜೆ ಅನುರಾಗ್ ಈಟಿವಿ ಭಾರತ ಜೊತೆಗೆ ಮಾತನಾಡಿ, ನಾನು ಹಲವು ಅಂತಾರಾಷ್ಟ್ರೀಯ ವಿಮಾನ ಪ್ರಯಾಣ ಮಾಡಿದ್ದೇನೆ. ಆದರೆ, ಈ ಬಾರಿ ತುಂಬಾ ಕೆಟ್ಟ ಅನುಭವವಾಯಿತು. ಮೊದಲ ದಿನ ವಿಮಾನದಲ್ಲಿ ಕುಳಿತುಕೊಂಡ ನಮ್ಮನ್ನು ಮಧ್ಯರಾತ್ರಿ ಮೂರು ಗಂಟೆಗೆ ವಿಮಾನಕ್ಕೆ ಹಕ್ಕಿಯೊಂದು ಡಿಕ್ಕಿ ಹೊಡೆದಿದೆ ಎಂದು ಹೊರಕಳುಹಿಸಿದರು. ಮರುದಿನ ವಿಮಾನದ ವ್ಯವಸ್ಥೆ ಮಾಡುವುದಾಗಿ ಹೇಳಿ ವಿಮಾನ ನಿಲ್ದಾಣದಿಂದ ಹೊರಗೆ ಕಳುಹಿಸಿದರು. ಮಧ್ಯರಾತ್ರಿ ನಮಗೆ ಯಾವುದೇ ವಸತಿ ವ್ಯವಸ್ಥೆಯೂ ಮಾಡಲಿಲ್ಲ. ಎಲ್ಲರೂ ಅವರವರೆ ಪ್ರತ್ಯೇಕ ವ್ಯವಸ್ಥೆ ಮಾಡಿದರು. ಮರುದಿನ ಬಹರೈರ್ನಿಂದ ಓರ್ವ ಪ್ರಯಾಣಿಕನಿಗಾಗಿ ತಡ ಕೂಡ ಮಾಡಿದರು. ಈ ಬಗ್ಗೆ ಪ್ರಶ್ನಿಸಿದಾಗ ವಿಮಾನದ ಫೈಲಟ್ ಬಳಿ ಸರಿಯಾದ ಉತ್ತರವೂ ಇರಲಿಲ್ಲ. ವಿಮಾನ ಮರುದಿನ ಬೆಳಿಗ್ಗೆ ಮುಂಬಯಿಗೆ ಬಂದಾಗ ಮಂಗಳೂರಿನ ಕನೆಕ್ಟಿಂಗ್ ಫ್ಲೈಟ್ ತಪ್ಪಿತ್ತು. ಈ ಎಲ್ಲ ಕಾರಣಗಳಿಂದ ಬಹರೈನ್ನಿಂದ ಮಂಗಳೂರು ತಲುಪಲು ಎರಡು ದಿನ ಬೇಕಾಯಿತು. ಈ ಬಗ್ಗೆ ವಿಮಾನಯಾನ ಸಂಸ್ಥೆ ವಿಷಾದ ಕೂಡ ವ್ಯಕ್ತಪಡಿಸಿಲ್ಲ ಎಂದು ಅವರು ನೋವು ತೋಡಿಕೊಂಡರು.
ಇದನ್ನೂ ಓದಿ : ಮಂಗಳೂರು ವಿಮಾನ ನಿಲ್ದಾಣದಲ್ಲಿ 2.60 ಕೋಟಿ ರೂ. ಮೌಲ್ಯದ ವಜ್ರ ವಶ