ಪುತ್ತೂರು: ಯುವ ಸಮುದಾಯಕ್ಕೆ ಕಂಬಳದಲ್ಲಿ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಕಂಬಳ ಸಮಿತಿ ವತಿಯಿಂದ ಕಂಬಳ ಕ್ರೀಡೆಯಲ್ಲಿ ಆಸಕ್ತಿ ಇರುವವರಿಗೆ ಕಂಬಳದ ಕೋಣ ಓಡಿಸುವ ಬಗ್ಗೆ ತರಬೇತಿ ಹಮ್ಮಿಕೊಳ್ಳುವುದು ಉತ್ತಮ. ಕೋಣ ಓಡಿಸುವ ಕಲೆಯನ್ನು ಕರಗತ ಮಾಡಿಕೊಳ್ಳಲು ಈ ತರಬೇತಿ ಸಹಕಾರಿಯಾಗಬಹುದು ಎಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅಭಿಪ್ರಾಯಪಟ್ಟರು.
ಪುತ್ತೂರು ಕಂಬಳ ಸಮಿತಿಯ ವತಿಯಿಂದ ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಳದ ಮುಂಭಾಗದಲ್ಲಿರುವ ದೇವರಮಾರು ಗದ್ದೆಯಲ್ಲಿ ನಡೆಯುತ್ತಿರುವ 30ನೇ ವರ್ಷದ ಹೊನಲು ಬೆಳಕಿನ ಕೋಟಿ ಚೆನ್ನಯ ಜೋಡುಕರೆ ಕಂಬಳವನ್ನು ಇಂದು ಬೆಳಗ್ಗೆ ಉದ್ಘಾಟಿಸಿ ಮಾತನಾಡಿದರು.
ಪುತ್ತೂರಿನ ಕಂಬಳದಲ್ಲಿ ವರ್ಷದಲ್ಲಿ ಕನಿಷ್ಠ ನಾಲ್ಕು ಬಾರಿಯಾದರೂ ಕಂಬಳವನ್ನು ನಡೆಸುವ ಮೂಲಕ ಕಂಬಳ ಕೋಣಗಳ ಮಾಲೀಕರಿಗೆ ಮತ್ತು ಅಭಿಮಾನಿಗಳಿಗೆ ಕಂಬಳ ವೀಕ್ಷಣೆಗೆ ಅವಕಾಶ ನೀಡಬೇಕು ಎಂದ ಅವರು 30ನೇ ವರ್ಷದಲ್ಲಿರುವ ಪುತ್ತೂರು ಕಂಬಳವು ಪೂರ್ಣಮಂಡಲವಾದ 48 ವರ್ಷವನ್ನು ದಾಟಿ ಮುಂದುವರಿಯಲಿ ಎಂದು ಹಾರೈಸಿದರು.
ಸಭಾ ಅಧ್ಯಕ್ಷತೆ ವಹಿಸಿದ್ದ ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈ ಅವರು ಮಾತನಾಡಿ, ಪುತ್ತೂರಿನ ಕಂಬಳಕ್ಕೆ ತನ್ನದೇ ಆದ ವೈಶಿಷ್ಟತೆಗಳಿದ್ದು, ಉತ್ತಮ ರೀತಿಯಲ್ಲಿ ಮುನ್ನಡೆಯುತ್ತಿದೆ. ಹಿಂದೆ ಹಳ್ಳಿಯಲ್ಲಿ ಗದ್ದೆ ಕೃಷಿ ಮಾಡುವವನು ಅವನಷ್ಟಕ್ಕೆ ನಾಲ್ಕು ಕೋಣಗಳನ್ನು ಓಡಿಸಿ ಖುಷಿ ಅನುಭವಿಸುತ್ತಿದ್ದ. ಆದರೆ, ಅದು ಈಗ ಬೆಳೆದು ಬಂದು ಬಹುದೊಡ್ಡ ಮಟ್ಟದಲ್ಲಿ ಆಯೋಜನೆಗೊಳ್ಳುವ ಜಾನಪದ ಕ್ರೀಡೆಯಾಗಿ ನಡೆಯುತ್ತಿದೆ.
ಮುಂದಿನ ಪೀಳಿಗೆಗೂ ಕಂಬಳ ಕ್ರೀಡಾಕೂಟವು ತಲುಪುವಂತಾಗಬೇಕು. ಈ ನಿಟ್ಟಿನಲ್ಲಿ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿ ಹಾಗೂ ಕಂಬಳ ಸಮಿತಿ ಜೊತೆಯಾಗಿ ಪ್ರಯತ್ನ ಪಟ್ಟರೆ, ನಮ್ಮ ಮುಂದಿನ ಪೀಳಿಗೆಯೂ ಕರಾವಳಿಯ ಜಾನಪದ ಕ್ರೀಡೆ ಕಂಬಳದ ಸೊಬಗನ್ನು ಸವಿಯಬಹುದು ಎಂದರು.
ಕಂಬಳ ಸಮಿತಿಯ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ವಸಂತ ಕುಮಾರ್ ರೈ, ನಿರಂಜನ್ ರೈ ಮಠಂತಬೆಟ್ಟು, ದಿನೇಶ್, ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ರೆ. ಫಾ. ಆ್ಯಂಟನಿ ಪ್ರಕಾಶ್ ಮೊಂತೆರೋ, ಗಣೇಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ಪುತ್ತೂರು ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಎಲ್. ಟಿ. ಅಬ್ದುಲ್ ರಝಾಕ್ ಹಾಜಿ, ಸುಧಾನ ದೇವಾಲಯದ ಧರ್ಮಗುರು ರೆ. ವಿಜಯ ಹಾರ್ವಿನ್, ಪುತ್ತೂರು ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಗೆಜ್ಜೆಗಿರಿ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಶೇಖರ್ ನಾರಾವಿ, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ಎನ್ ಸುಧಾಕರ್ ಶೆಟ್ಟಿ, ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ, ಸಂಜೀವ ಪೂಜಾರಿ ಕೂರೇಲು, ಚೆನ್ನಪ್ಪ ರೈ ದೇರ್ಲ, ನಿರ್ಮಲ್ ಕುಮಾರ್ ಜೈನ್, ಪ್ರಶಾಂತ್ ಕುಮಾರ್ ಕೈಕಾರ, ಬೈಲು ಮಾರಪ್ಪ ಶೆಟ್ಟಿ, ಪ್ರೀತಂ ಪೂಂಜಾ, ಕರುಣಾಕರ ಸುವರ್ಣ, ನಾರಾಯಣ ರೈ ಕುಕ್ಕುವಳ್ಳಿ, ಧರ್ಣಪ್ಪ ಮೂಲ್ಯ, ಭಾಸ್ಕರ್ ಗೌಡ ಕೋಡಿಂಬಾಳ, ಜೋಕಿಂ ಡಿಸೊಜ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: ಮಂಗಳೂರು ರಾಮ-ಲಕ್ಷ್ಮಣ ಜೋಡುಕರೆ ಕಂಬಳಕ್ಕೆ ತೆರೆ: ಈ ಸಲ 159 ಜೋಡಿ ಕೋಣಗಳು ಭಾಗಿ