ಮಂಗಳೂರು: ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಂದ ನಮ್ಮ ಜಿಲ್ಲೆ ಇನ್ನಷ್ಟು ಅಭಿವೃದ್ಧಿ ಹೊಂದಲಿ. ಈ ಕಚೇರಿ ಜನಸೇವಕರ ಕಾರ್ಯಾಲಯ ಆಗಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಶುಭ ಹಾರೈಸಿದ್ದಾರೆ.
ದ.ಕ.ಜಿಲ್ಲಾಧಿಕಾರಿ ಕಚೇರಿಯ ಕೆಳ ಅಂತಸ್ತಿನಲ್ಲಿ ನಿರ್ಮಿಸಲಾಗಿರುವ ಮೀನುಗಾರಿಕೆ, ಬಂದರು, ಮುಜರಾಯಿ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ನೂತನ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದ್ರು.
'ಅಭಿವೃದ್ದಿ ಕಾರ್ಯಗಳಿಗೆ ಚುರುಕು'
ದ.ಕ.ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಹತ್ತಾರು ಯೋಜನೆಗಳಿಗೆ ನಾನು, ಕೋಟ ಹಾಗೂ ಇಲ್ಲಿನ ಶಾಸಕರು ಸೇರಿ ಚರ್ಚೆ ಮಾಡಿದ್ದೇವೆ. ಹತ್ತಾರು ಯೋಜನೆಗಳು ಅನುಷ್ಠಾನಗೊಂಡರೂ ಕಾರ್ಯ ವಿಳಂಬದಿಂದ ಕುಂಠಿತಗೊಂಡಿದೆ. ಆ ಎಲ್ಲಾ ಕಾರ್ಯಗಳಿಗೆ ವೇಗ ಕೊಡುವುದು, ಮೂಲಭೂತ ಸೌಕರ್ಯಗಳಿಗೆ ಆದ್ಯತೆ, ಮರಳು, ಕುಮ್ಕಿ ಜಾಗಗಳ ಸಮಸ್ಯೆಗಳಿಗೆ ಪರಿಹಾರ ಕೊಡುವಂತಹ ಕೆಲಸವನ್ನು ಯುದ್ಧೋಪಾದಿಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಮಾಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದವರು ಹೇಳಿದ್ರು.
'ವಿಪಕ್ಷದ ನಾಯಕರಾಗಿ ಸರ್ಕಾರದ ಬೆವರಿಳಿಸಿದ್ದಾರೆ'
ಶ್ರೀನಿವಾಸ ಪೂಜಾರಿ ವಿಧಾನ ಪರಿಷತ್ ಸದಸ್ಯರಾಗಿ ಪಂಚಾಯತ್ ಸದಸ್ಯರಿಗೆ 1000 ರೂ. ಮಾಸಾಶನ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಿಂದೆ ಓರ್ವ ಧಾರ್ಮಿಕ ದತ್ತಿ ಸಚಿವರಾಗಿ ಸಾಮಾನ್ಯ ದೇವಸ್ಥಾನಗಳಿಗೂ ಕೋಟಿ ಕೋಟಿ ರೂ ಅನುದಾನ ಕೊಡಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಅಲ್ಲದೇ ವಿರೋಧ ಪಕ್ಷದ ನಾಯಕರಾಗಿ ಸರ್ಕಾರದ ಬೆವರಿಳಿಸಿದ್ದಾರೆ. ಆದ್ದರಿಂದ ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಅವರಿಗೆ ಅರಿವಿದೆ. ಈ ಅನುಭವದ ಆಧಾರದ ಮೇಲೆ ದ.ಕ ಜಿಲ್ಲೆಯ ಯಶಸ್ವಿ ಉಸ್ತುವಾರಿ ಸಚಿವರಾಗುತ್ತಾರೆಂಬ ಎಂದವರು ವಿಶ್ವಾಸ ವ್ಯಕ್ತಪಡಿಸಿದ್ರು.