ಮಂಗಳೂರು: ಮಂಗಳೂರು ಸ್ಮಾರ್ಟ್ ಸಿಟಿಯಿಂದ ನಗರದ ಎಮ್ಮೆಕೆರೆಯಲ್ಲಿ ನಿರ್ಮಾಣವಾದ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳದ ಉದ್ಘಾಟನೆಯನ್ನು ನಗರಾಭಿವೃದ್ದಿ ಸಚಿವ ಬಿ.ಎಸ್ ಸುರೇಶ್ ನೆರವೇರಿಸಿದರು.
ಶುಕ್ರವಾರ ಉದ್ಘಾಟನೆಗೊಂಡ ಎಮ್ಮೆಕೆರೆ ಈಜುಕೊಳದಲ್ಲಿ ಇಂದಿನಿಂದ ಮೂರು ದಿನಗಳ ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಈ ರಾಷ್ಟ್ರೀಯ ಸ್ಪರ್ಧೆಯಲ್ಲಿ 29 ರಾಜ್ಯಗಳ 800ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ. ಈ ಸ್ಪರ್ಧೆಯನ್ನು ನಡೆಸಲು ಈಜು ಫೆಡರೇಶನ್ ಆಪ್ ಇಂಡಿಯಾದ 150 ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಸ್ವಯಂ ಸೇವಕರು ಭಾಗಿಯಾಗಿದ್ದಾರೆ.
ಇಂಡಿಯನ್ ಸ್ವಿಮ್ಮಿಂಗ್ ಫೆಡರೇಶನ್ನ್ನಿಂದ ಕರ್ನಾಟಕ ಸ್ವಿಮ್ಮಿಂಗ್ ಅಸೋಸಿಯೇಶನ್ ಸಹಯೋಗದಲ್ಲಿ ಈ ಸ್ಪರ್ಧೆ ನಡೆಯುತ್ತಿದೆ. ಈ ಸ್ಪರ್ಧೆಯಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಉತ್ತರಪ್ರದೇಶ, ಅಸ್ಸೋಂ, ಚಂಡೀಗಡ, ದೆಹಲಿ, ಗುಜರಾತ್, ಹರಿಯಾಣ, ಲಕ್ಷದ್ವೀಪ, ಮಣಿಪುರ, ಮೇಘಾಲಯ, ರಾಜಸ್ತಾನ, ಸಿಕ್ಕಿಂ, ತಮಿಳುನಾಡು, ಉತ್ತರಾಖಂಡ, ಪಶ್ಚಿಮ ಬಂಗಾಳ, ಒಡಿಶಾ ರಾಜ್ಯಗಳ ಈಜುಪಟುಗಳು ಆಗಮಿಸಿದ್ದಾರೆ.
ಸುಮಾರು 2 ಎಕರೆ ಜಾಗದಲ್ಲಿ 24.94 ಕೋಟಿ ರೂ. ವೆಚ್ಚದಲ್ಲಿ ಈಜುಕೊಳ ನಿರ್ಮಾಣವಾಗಿದೆ. ಈಜುಕೊಳ ಸಂಕೀರ್ಣವು 50 ಮೀ ಉದ್ದ, 25 ಮೀ ಅಗಲ ಮತ್ತು 2.2 ಮೀ ನಿಂದ 1.4 ಮೀಟರ್ವರೆಗಿನ ಆಳವನ್ನು ಹೊಂದಿದೆ. ಕ್ರೀಡಾಪಟುಗಳಿಗೆ ತರಬೇತಿಗಾಗಿ 25 ಮೀ ಉದ್ದ, 10 ಮೀ ಅಗಲ ಮತ್ತು 2.2 ಮೀ ಆಳದ ಅಭ್ಯಾಸ ಕೊಳವನ್ನು ನಿರ್ಮಿಸಲಾಗಿದೆ. ಮಕ್ಕಳ ತರಬೇತಿಗಾಗಿ 13.8 ಮೀ ಉದ್ದ, 10 ಮೀ. ಅಗಲ ಮತ್ತು 1.2 ಮೀ ಆಳದ ಪುಟಾಣಿ ಈಜುಕೊಳವನ್ನು ನಿರ್ಮಿಸಲಾಗಿದೆ. ಈ ಈಜುಕೊಳ ಎರಡನೇ ಮಹಡಿಯಲ್ಲಿ ಇರುವುದು ವಿಶೇಷ. ನೆಲದಿಂದ +7.0 ಮೀ ಡೆಕ್ ಮಟ್ಟದ ಎತ್ತರದಲ್ಲಿ ಈಜುಕೊಳ ನಿರ್ಮಾಣ ಮಾಡಲಾಗಿದೆ. ಈಜುಕೊಳ ಸಂಕೀರ್ಣದಲ್ಲಿ ಸ್ಪರ್ಧಾಳು ಈಜುಪಟುಗಳಿಗೆ ವಸತಿ ನಿಲಯ, ಜಿಮ್ನಾಷಿಯಂ, ಬಟ್ಟೆ ಬದಲಾಯಿಸುವ ಕೊಠಡಿ, ಶೌಚಾಲಯಗಳು, ಲಾಕರ್ಗಳು, ಆಡಳಿತ ಕಚೇರಿ ಮತ್ತು ಕ್ರೀಡಾ ಔಷಧ ಮತ್ತು ಚಿಕಿತ್ಸಾ ಕೊಠಡಿಗಳು ಇದೆ.
ಈ ಸ್ಪರ್ಧೆಯ ಬಗ್ಗೆ ಮಾತನಾಡಿದ ಆಯೋಜಕ ತೇಜೊಮಯ ಅವರು, ಈ ಸ್ಪರ್ಧೆಯಲ್ಲಿ 29 ರಾಜ್ಯಗಳ 850 ಸ್ಪರ್ಧಿಗಳು ಬಂದಿದ್ದಾರೆ. ಮೇಘಾಲಯ, ಮಣಿಪುರ, ಸಿಕ್ಕಿಂನಿಂದಲೂ ಸ್ಪರ್ಧಿಗಳು ಬಂದಿದ್ದಾರೆ. ಮೂರು ದಿನ 300 ಸ್ಪರ್ಧೆಗಳು ನಡೆಯಲಿದೆ. 12 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಇಲ್ಲಿಂದ ಆಯ್ಕೆಯಾದವರು ಏಷ್ಯಾಡ್ ಸ್ಪರ್ಧೆಗೆ ಭಾಗವಹಿಸಲು ಅರ್ಹರಾಗುತ್ತಾರೆ.
ಕರ್ನಾಟಕದ ಸ್ಪರ್ಧಿ ಸಂಧ್ಯಾ ಪ್ರಭು ಮಾತನಾಡಿ, ಇಲ್ಲಿ ಈಜುಕೊಳವನ್ನು ತುಂಬಾ ಚೆನ್ನಾಗಿ ನಿರ್ಮಾಣ ಮಾಡಲಾಗಿದೆ. ನಮ್ಮ ನಿರೀಕ್ಷೆಗಿಂತಲೂ ತುಂಬಾ ಚೆನ್ನಾಗಿ ಒಲಿಂಪಿಕ್ಸ್ ರೀತಿಯಲ್ಲಿ ಮಾಡಿದ್ದಾರೆ. ಬೇರೆ ಕಡೆ ಹೋದಾಗ ಈ ರೀತಿಯ ವ್ಯವಸ್ಥೆ ಇರಲಿಲ್ಲ. ಮುಂದೆ ರಾಷ್ಟ್ರೀಯ ಸ್ಪರ್ಧೆಯಲ್ಲಿ ಇದೇ ರೀತಿಯ ವ್ಯವಸ್ಥೆ ಇರಲಿ ಎಂದು ನಿರೀಕ್ಷಿಸುತ್ತೇವೆ ಎಂದರು.
ಉತ್ತರಪ್ರದೇಶದ ಸ್ಪರ್ಧಿ ಸೆಬಾಸ್ಟಿನ್ ಮಾತನಾಡಿ, ನಾವು 2004 ರಿಂದ ಸ್ಪರ್ಧೆಯಲ್ಲಿ ಭಾಗವಹಿಸಿ ಪದಕ ಪಡೆದಿದ್ದೇವೆ. ಈಜುಕೊಳವನ್ನು ತುಂಬಾ ಚೆನ್ನಾಗಿ ಮಾಡಿದ್ದಾರೆ ಎಂದಿದ್ದಾರೆ. ಆಂಧ್ರಪ್ರದೇಶದ ಸ್ಪರ್ಧಿ ಶ್ಯಾಮಲ ಮಾತನಾಡಿ ಇಲ್ಲಿ ಈಜುಕೊಳವನ್ನು ತುಂಬಾ ಸುಂದರವಾಗಿ ನಿರ್ಮಾಣ ಮಾಡಿದ್ದಾರೆ. ಉತ್ತಮ ವ್ಯವಸ್ಥೆ ಕಲ್ಪಿಸಿದ್ದಾರೆ ಉತ್ತಮ ಸ್ಪಂದನೆ ನೀಡಿದರು.
89ರ ತಾತನಲ್ಲೂ ಈಜು ಸ್ಪರ್ಧೆಯ ಉತ್ಸಾಹ: ರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ 89ರ ತಾತ ತೆಲಂಗಾಣದ ಓಮ್ ಸೇತ್ ಭಾಗವಹಿಸಿ ಗಮನ ಸೆಳೆದರು. 85 ರಿಂದ 90 ರ ವಿಭಾಗದಲ್ಲಿ ಇವರು ಭಾಗವಹಿಸಿದ್ದರು. ಇವರು ಸರಿಯಾಗಿ ನಡೆಯಲು ಆಗದಿದ್ದರೂ ಈಜಿನ ಮೇಲೆ ಅತಿ ಆಸಕ್ತಿ ಹೊಂದಿದ್ದಾರೆ. ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಬಳಿಕ ಮಾತನಾಡಿದ ಅವರು ನಾನು ಈಜು ಸ್ಪರ್ಧೆಯಲ್ಲಿ ಹಲವು ಪದಕಗಳನ್ನು ಪಡೆದಿದ್ದೇನೆ. ಏಷ್ಯಾ ಮಟ್ಟದ, ವಿಶ್ವ ಮಟ್ಟದ ಸ್ಪರ್ಧೆಯಲ್ಲಿಯೂ ನಾನು ಭಾಗವಹಿಸಿದ್ದೆ. ಈಜು ನನ್ನ ಜೀವನ ಕ್ರಮವಾಗಿದ್ದು, ಇದೊಂದು ಉತ್ತಮ ವ್ಯಾಯಾಮವಾಗಿದೆ. ಇದು ಆರೋಗ್ಯಕ್ಕೂ ಒಳ್ಳೆಯದು ಎನ್ನುತ್ತಾರೆ.
ಇದನ್ನೂ ಓದಿ: ಬೆಂಗಳೂರು ಕಂಬಳ: ಉಪ್ಪಿನಂಗಡಿಯಿಂದ ಹೊರಟ ಸುಮಾರು 150 ಜೋಡಿ ಕೋಣಗಳು-ವಿಡಿಯೋ