ಮಂಗಳೂರು: ಸ್ಟಾರ್ ನಟ ಅಲ್ಲು ಅರ್ಜುನ್ ಅಭಿನಯದ 'ಪುಷ್ಪಾ' ಸಿನಿಮಾ ಸಾಕಷ್ಟು ಸದ್ದು ಮಾಡಿರೋದು ಎಲ್ಲರಿಗೂ ಗೊತ್ತೇ ಇದೆ. ಅದರಲ್ಲೂ ಈ ಸಿನಿಮಾದ ಶ್ರೀವಲ್ಲಿ ಹಾಡು ಹಾಗೂ ಅದರ ಸ್ಟೆಪ್ ಅಂತೂ ಸಖತ್ ಫೇಮಸ್. ಈ ಹಾಡು ಹಾಗೂ ಸ್ಟೆಪ್ ಸಾಕಷ್ಟು ಟ್ರೋಲ್ ಕೂಡ ಆಗಿತ್ತು. ಇದೀಗ ಯಕ್ಷಗಾನದಲ್ಲೂ ಇದು ಕೇಳಿ ಬಂದಿದೆ.
ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮೇಳದಲ್ಲಿ ಈ ಶ್ರೀವಲ್ಲಿ ಹಾಡು ಕೇಳಿಬಂದಿದೆ. ಅಷ್ಟೇ ಅಲ್ಲದೆ ಯಕ್ಷಗಾನದ ಹಾಸ್ಯ ಪಾತ್ರಧಾರಿ ಸಿನಿಮಾದಲ್ಲಿ ಈ ಹಾಡಿಗೆ ಅಳವಡಿಸಲಾದ ಡಿಫರೆಂಟ್ ಸ್ಟೆಪ್ನ್ನು ಹಾಕಿದ್ದಾರೆ. ಇದಕ್ಕೆ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ರಂಗದಲ್ಲಿ ಕಲಾವಿದರು ನಗುವ ದೃಶ್ಯ ಕಂಡುಬಂದಿದೆ.
ಇದನ್ನೂ ಓದಿ: ಅತಿರೇಖದ ಅಭಿಮಾನ.. ಫ್ಯಾನ್ ಎಡವಟ್ಟಿನಿಂದ ಕಾರಿನ ಮೇಲೆ ಬಿದ್ರು ನಟ ಪವನ್ ಕಲ್ಯಾಣ್- ವಿಡಿಯೋ
ಇದೀಗ ಈ ವಿಡಿಯೋ ಭಾರೀ ವೈರಲ್ ಆಗುತ್ತಿದ್ದು, ಯಕ್ಷಗಾನ ಅಭಿಮಾನಿಗಳ ಕೆಂಗಣ್ಣಿಗೂ ಗುರಿಯಾಗಿದೆ. ಯಕ್ಷಗಾನಕ್ಕೆ ಅದರದ್ದೇ ಆದ ಚೌಕಟ್ಟು ಇದೆ. ಭಾಗವತಿಕೆಗೆ ಅದರದ್ದೇ ಆದ ಸಾಂಪ್ರದಾಯಿಕ ಶೈಲಿಯ ಯಕ್ಷಗಾನೀಯ ಪದ್ಯಗಳಿದ್ದರೆ, ಮುಮ್ಮೇಳಕ್ಕೆ ಯಕ್ಷಗಾನದ್ದೇ ಆದ ನೃತ್ಯಗಳಿವೆ. ಆದರೆ ಇದೀಗ ಮನೋರಂಜನೆ ಎಂದು ಯಕ್ಷಗಾನಕ್ಕೆ ಅಪಥ್ಯವಾದ, ಅಪಚಾರವೆನಿಸುವ ಹಾಡು, ನೃತ್ಯಗಳ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ.