ಮಂಗಳೂರು : ಕೊರೊನಾ ನಿಯಂತ್ರಣಕ್ಕೆ ವಾರಾಂತ್ಯದ ಕರ್ಫ್ಯೂ ಸಂದರ್ಭದಲ್ಲಿ ಸಂಪೂರ್ಣ ಲಾಕ್‍ಡೌನ್ ಇದ್ದು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಬೇಕು ಎಂದು ಅಧಿಕಾರಿಗಳಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಸೂಚಿಸಿದ್ದಾರೆ.
ಇಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ತಹಶೀಲ್ದಾರ್ಗಳು, ತಾಲೂಕು ಆರೋಗ್ಯಾಧಿಕಾರಿಗಳ ಜೊತೆಗೆ ಕೊರೊನಾ ನಿಯಂತ್ರಣ ಕುರಿತ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಮಾತನಾಡಿದರು.
ಜೂನ್ 25ರ ಸಂಜೆ 7ರಿಂದ ಜೂನ್ 28ರ ಬೆಳಗ್ಗೆ 7ರವರೆಗೆ ಜಿಲ್ಲೆಯಾದ್ಯಂತ ಸಂಪೂರ್ಣ ಲಾಕ್‍ಡೌನ್ ಇರಲಿದ್ದು, ಹಾಲಿನ ವಿತರಣಾ ಕೇಂದ್ರಗಳು, ಆಸ್ಪತ್ರೆ, ಸರ್ಕಾರಿ ಕೆಲವು ಕಚೇರಿಗಳನ್ನು ಮಾತ್ರ ತೆರೆಯಲು ಅವಕಾಶವಿದೆ. ಇತರೆ ಯಾವುದೇ ಚಟುವಟಿಕೆಗಳು ಇರುವುದಿಲ್ಲ. ವಾರಾಂತ್ಯದಲ್ಲಿ ಸರ್ಕಾರಿ ಕಚೇರಿಗಳಿಗೆ ರಜೆ ಇರುವುದರಿಂದ ಜನರು ಅನಾವಶ್ಯಕವಾಗಿ ಓಡಾಡುವುದು ತರವಲ್ಲ. ಸಂಪೂರ್ಣ ಬಂದ್ ಮಾಡುವುದರಿಂದ ಕೊರೊನಾ ಹರಡುವಿಕೆ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡಲು ಸಾಧ್ಯ ಎಂದರು.
ಸರ್ಕಾರಿ ಸೇರಿದಂತೆ ಇತರೆ ಖಾಸಗಿ ಕಟ್ಟಡ ಕಾಮಗಾರಿಗಳಿಗೆ ನಿರಂತರ ಚಲನೆಯಲ್ಲಿರುವ ಕಾರ್ಖಾನೆಗಳಿಗೆ, ಹೊಟೇಲ್‍ಗಳಲ್ಲಿ ಪಾರ್ಸೆಲ್ ಕೊಡಲು ಮಾತ್ರ ಅವಕಾಶವಿರುತ್ತದೆ. ಪೂರ್ವ ನಿಗದಿತ ಅನುಮತಿ ಪಡೆದ ಮದುವೆ ಮತ್ತಿತರ ಸಮಾರಂಭಗಳಿಗೆ 25 ಜನರಿಗೆ ಸೀಮಿತಗೊಳಿಸಿ ಮನೆಗಳಲ್ಲಿಯೇ ಕಾರ್ಯಕ್ರಮ ನೆರವೇರಿಸಲು ಅವಕಾಶ ನೀಡಲಾಗಿದೆ. ಕ್ಲಿನಿಕ್‍ಗಳಲ್ಲಿ ಕೆಮ್ಮು, ಶೀತ, ಜ್ವರ ಬಂದವರಿಗೆ ಚಿಕಿತ್ಸೆಯನ್ನು ವೈದ್ಯರು ನೀಡುತ್ತಿದ್ದಾರೆ. ಅಂತಹ ರೋಗಿಗಳ ಕೋವಿಡ್ ಪರೀಕ್ಷೆಗಳನ್ನು ಕಡ್ಡಾಯವಾಗಿ ಮಾಡಿಸಲೇಬೇಕು ಎಂದರು. ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ವೈದ್ಯಕೀಯ ಸಿಬ್ಬಂದಿ ಕೊರೊನಾ ಪೂರ್ಣ ಪ್ರಮಾಣವಾಗಿ ಮುಕ್ತವಾಗಿದೆ ಎಂಬ ಮನೋಭಾವವನ್ನು ಹೊಂದಬಾರದು. ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್ಗಳಿಗೆ ವರ್ಗಾಯಿಸಬೇಕು ಎಂದರು.
ಸರ್ಕಾರದಿಂದ ಬರುವ ಕೊರೊನಾ ನಿರೋಧಕ ಚುಚ್ಚು ಮದ್ದುಗಳ ದಾಸ್ತಾನನ್ನು ಅಂದೇ ಪೂರ್ಣ ಪ್ರಮಾಣದಲ್ಲಿ ನೀಡಲು ಯೋಜನೆಯನ್ನು ರೂಪಿಸಬೇಕು. ಈ ಕಾರ್ಯಕ್ಕೆ ನಿವೃತ್ತ ವೈದ್ಯರನ್ನು ಬಳಸಿಕೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದರು.
3ನೇ ಅಲೆಯಲ್ಲಿ ಮಕ್ಕಳನ್ನು ಸೋಂಕು ಬಾಧಿಸುವ ಸಂಭವವಿದೆ ಎಂಬುದರ ಬಗ್ಗೆ ಕೇಳಿ ಬರುತ್ತಿದೆ. ಪೋಷಕರು ತಮ್ಮ ಮಕ್ಕಳ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಬೇಕು. ಅಂಗಡಿಗಳಲ್ಲಿ ಮಕ್ಕಳನ್ನು ಬಿಡಕೂಡದು. ಒಂದೊಮ್ಮೆ ನಿಯಮ ಉಲ್ಲಂಘಿಸಿದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಉಪವಿಭಾಗದ ಅಧಿಕಾರಿಗಳು, ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಕೊರೊನಾ ನಿಯಂತ್ರಣಾ ಕ್ರಮಗಳ ಬಗ್ಗೆ ಮೇಲುಸ್ತುವಾರಿ ನೋಡಿಕೊಳ್ಳಬೇಕು. ತಹಶೀಲ್ದಾರುಗಳು ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರತಿದಿನ ತಮ್ಮ ಕೆಳಗಿನ ಅಧಿಕಾರಿ ಸಿಬ್ಬಂದಿಯೊಂದಿಗೆ ಕೊರೊನಾ ನಿಯಂತ್ರಣ ಕ್ರಮಗಳ ಬಗ್ಗೆ ಸಭೆ ನಡೆಸಿ ಮಾಹಿತಿ ಪಡೆಯಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ದ.ಕ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ.ಕುಮಾರ್, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಸೋನಾವಾನೆ, ಅಪರ ಜಿಲ್ಲಾಧಿಕಾರಿ ಡಾ.ಪ್ರಜ್ಞಾ ಅಮ್ಮೆಂಬಳ, ಉಪ ವಿಭಾಗಾಧಿಕಾರಿ ಮದನ್ ಮೋಹನ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕಿಶೋರ್ ಹಾಗೂ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.