ಮಂಗಳೂರು: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ಅಕ್ರಮವಾಗಿ ಸಾಗಿಸುತ್ತಿದ್ದ ಭಾರಿ ಪ್ರಮಾಣದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಆರೋಪಿ ಪ್ರಯಾಣಿಕ ದುಬೈನಿಂದ ಮಂಗಳೂರಿಗೆ ಏರ್ ಇಂಡಿಯಾ ವಿಮಾನದಲ್ಲಿ ಬಂದಿಳಿದಿದ್ದರು.
ರಟ್ಟಿನ ಪೆಟ್ಟಿಗೆಯ ಒಳಭಾಗದಲ್ಲಿ ಇರಿಸಲಾಗಿದ್ದ ನಾಲ್ಕು ನೀಲಿ ಬಣ್ಣದ ದಪ್ಪದ ಕಾಗದದ ಹಾಳೆಗಳ ಎರಡು ಪದರಗಳ ನಡುವೆ ಚಿನ್ನದ ಪೌಡರ್ ಅಡಗಿಸಿಡಲಾಗಿತ್ತು. ಕಸ್ಟಮ್ಸ್ ಅಧಿಕಾರಿಗಳು ಅಕ್ರಮ ಪತ್ತೆ ಹಚ್ಚಿ, ಬಚ್ಚಿಟ್ಟ 242 ಗ್ರಾಂ ಚಿನ್ನದ ಪುಡಿಯನ್ನು ವಶಪಡಿಸಿಕೊಂಡಿದ್ದಾರೆ. ಇದರ ಮೌಲ್ಯ 14.50 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಅಧಿಕಾರಿಗಳು ಪ್ರಯಾಣಿಕನನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ಮುಂದುವರಿಸಿದ್ದಾರೆ.
ಬಸ್ ಹತ್ತುವಾಗ ಕೆಳಗೆ ಬಿದ್ದು ಮಹಿಳೆ ಸಾವು: ಬಸ್ ಹತ್ತುವ ಮೊದಲೇ ಕಂಡಕ್ಟರ್ ವಿಷಲ್ ಹೊಡೆದ ಪರಿಣಾಮ ಕೆಳಗೆ ಬಿದ್ದು ಮಹಿಳೆ ಸಾವನ್ನಪ್ಪಿದ ಘಟನೆ ಮೂಡಬಿದಿರೆಯಲ್ಲಿ ನಡೆದಿದೆ. ಮೂಡಬಿದಿರೆ ನಿವಾಸಿ ನೀಲಮ್ಮ ಮೃತರೆಂದು ಗುರುತಿಸಲಾಗಿದೆ. ಮೊಮ್ಮಗ ತೇಜಸ್ನೊಂದಿಗೆ ಇವರು ಮೂಡಬಿದಿರೆ ಆಸ್ಪತ್ರೆಗೆ ಹೊರಟಿದ್ದರು. ತೇಜಸ್ ಮತ್ತು ನೀಲಮ್ಮ ಮಾರೂರು ಗ್ರಾಮದ ಕುಂಟೋಡಿ ಎಂಬಲ್ಲಿ ಬೆಳಗ್ಗೆ 9:10ಕ್ಕೆ ಖಾಸಗಿ ಟ್ರಾವೆಲ್ಸ್ ಬಸ್ ಹತ್ತುತ್ತಿದ್ದರು. ತೇಜಸ್ ಹಿಂದಿನ ಬಾಗಿಲಿನಿಂದ ಬಸ್ ಹತ್ತಿದ್ದಾರೆ. ನೀಲಮ್ಮ ಮುಂಬಾಗಿನಿಂದ ಹತ್ತುತ್ತಿದ್ದಂತೆ ನಿರ್ವಾಹಕ ಅಶೋಕ ವಿಷಲ್ ಊದಿದ್ದಾರೆ. ಈ ವೇಳೆ ಚಾಲಕ ಪ್ರಸನ್ನ ಬಸ್ ಮುಂದಕ್ಕೆ ಚಲಾಯಿಸಿದ್ದಾರೆ. ಸಮತೋಲನ ಕಳೆದುಕೊಂಡ ಕೆಳಗೆ ಬಿದ್ದ ನೀಲಮ್ಮ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿತ್ತು.
ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲು ಕೊಂಡೊಯ್ಯಲಾಯಿತು. ಆದ್ರೆ ಮಾರ್ಗದಲ್ಲೇ ಮೃತಪಟ್ಟಿದ್ದಾರೆ. ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಬಸ್ ಚಾಲಕ ಮತ್ತು ನಿರ್ವಾಹಕನ ವಿರುದ್ಧ ಪ್ರಕರಣ ದಾಖಲಾಗಿದೆ. ಇಬ್ಬರನ್ನೂ ವಶಕ್ಕೆ ಪಡೆದ ಪೊಲೀಸರು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ. ಬಸ್ ವಶಕ್ಕೆ ಪಡೆದಿದ್ದು ಆರ್.ಟಿ.ಒ ಪರಿಶೀಲನೆಗಾಗಿ ವರದಿ ನೀಡಲಾಗಿದೆ.
ಇದನ್ನೂ ಓದಿ: ಮಂಗಳೂರು: ₹90 ಲಕ್ಷ ಮೌಲ್ಯದ ತಿಮಿಂಗಿಲ ವಾಂತಿ ಮಾರಾಟ ಯತ್ನ, ಮೂವರ ಬಂಧನ