ಬೆಳ್ತಂಗಡಿ : ಅಕ್ರಮ ಮರಳುಗಾರಿಕೆ ವಿಪರೀತವಾಗಿ ನಡೆಯುತ್ತಿದ್ದರೂ ಅಧಿಕಾರಿ ವರ್ಗ ಕಣ್ಮುಚ್ಚಿ ಕುಳಿತಿದೆ ಎಂದು ಇಲ್ಲಿನ ಸ್ಥಳೀಯರು ಆರೋಪಿಸಿದ್ದಾರೆ.
ಕಳೆದ ಅಗಸ್ಟ್ನಲ್ಲಿ ಉಂಟಾದ ನೆರೆಯಿಂದ ಕೃಷಿಭೂಮಿಗೆ ಬಂದಿದ್ದ ಮರಳನ್ನು ಸಾಗಿಸಲು ಜಿಲ್ಲಾಡಳಿತ ಕೆಲವರಿಗೆ ಅನುಮತಿ ನೀಡಿತ್ತು. ಅನುಮತಿ ಇಲ್ಲದವರೂ ಅನುಮತಿ ಇದೆ ಎಂದು ಹೇಳಿ ಕೆಲವು ಅಧಿಕಾರಿಗಳ ಸಹಕಾರದಿಂದ ಅವ್ಯಾಹತವಾಗಿ ನೇತ್ರಾವತಿ ನದಿಯಿಂದ ಮರಳು ಸಾಗಾಟ ಮಾಡುತ್ತಿದ್ದಾರೆ.
ಮಿತ್ತಬಾಗಿಲು ಗ್ರಾಮದ ನದಿಯ ಕೊಲ್ಲಿ ಸೇತುವೆಯ ಕೆಳಭಾಗ ಹಾಗೂ ಸುತ್ತಮುತ್ತ ಅಕ್ರಮ ಮರಳುಗಾರಿಕೆ ಹಗಲಿರುಳು ಎಗ್ಗಿಲ್ಲದೆ ನಡೆಯುತ್ತಿದೆ. ಮರಳು ತೆಗೆಯುತ್ತಿರುವುದರಿಂದ ಸೇತುವೆ ಹಾನಿಯಾಗುವ ಸಂಭವ ಹೆಚ್ಚಾಗಿದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಸ್ಥಳೀಯರು. ಮಿತಿ ಮೀರಿದ ಅಕ್ರಮ ಮರಳುಗಾರಿಕೆ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ. ಅಷ್ಟೇ ಅಲ್ಲ, ಗ್ರಾಮ ಪಂಚಾಯತ್ ಅಧಿಕಾರಿಗಳು ಗಮನ ಕೊಡುತ್ತಿಲ್ಲ ಎಂದು ಸ್ಥಳೀಯರು ದೂರಿದರು.
ಇದಕ್ಕೆ ಪೂರಕವೆಂಬಂತೆ ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಕೊಲ್ಲಿ ಕಡೆಯಿಂದ ಮರಳು ತುಂಬಿಕೊಂಡು ಬರುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಬಂಗಾಡಿ ಬಸದಿ ಸಮೀಪ ರಸ್ತೆಗೆ ಅಡ್ಡಲಾಗಿ ಪಲ್ಟಿಯಾಗಿದೆ. ಚಾಲಕನ ವೇಗದ ಚಾಲನೆಯೇ ಇದಕ್ಕೆ ಕಾರಣ ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು.