ಮಂಗಳೂರು: ನೇತ್ರಾವತಿ ನದಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ದಾಳಿ ನಡೆಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು, ಹಲವು ದೋಣಿಗಳನ್ನು ವಶಪಡಿಸಿ ಶೆಡ್ ತೆರವು ಮಾಡಿಸಿದ್ದಾರೆ.
ಜಿಲ್ಲೆಯ ಬಂಟ್ವಾಳ ತಾಲೂಕಿನ ತುಂಬೆ ಪರನೀರು ಎಂಬಲ್ಲಿ ಹೊಳೆ ಪೊರಂಬೋಳು ಸರಕಾರಿ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಿಸಲಾದ 22 ಮರಳು ಕಾರ್ಮಿಕರ ಶೆಡ್ ಮತ್ತು ಮಂಗಳೂರು ತಾಲೂಕಿನ ಇನೋಳಿಯಲ್ಲಿ ಮರಳು ಕಾರ್ಮಿಕರ ಟೆಂಟ್ ತೆರವು ಮಾಡಲಾಗಿದೆ. ಜೊತೆಗೆ ಅರ್ಕುಳ ದಕ್ಕೆಯಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಮೂರು ದೋಣಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಟ್ವಾಳ ತಾಲೂಕು ತಹಶೀಲ್ದಾರ್ ರಶ್ಮಿ ಎಸ್.ಆರ್., ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವಿಜ್ಞಾನಿ ಪದ್ಮಶ್ರೀ ಹಾಗೂ ಅಧಿಕಾರಿಗಳು, ಪೊಲೀಸರು ಕಾರ್ಯಾಚರಣೆಯಲ್ಲಿ ಇದ್ದರು.