ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 60 ಲಕ್ಷ ರೂ. ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಡಿಸೆಂಬರ್ 11 ರಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಮೂಲಕ ದುಬೈನಿಂದ ಮಂಗಳೂರಿಗೆ ಪ್ರಯಾಣಿಸಿದ್ದ 3 ಪ್ರಯಾಣಿಕರನ್ನು ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ತಡೆದು ಪರಿಶೀಲನೆ ನಡೆಸಿದಾಗ ಅಕ್ರಮ ಚಿನ್ನ ಸಾಗಾಟ ಪತ್ತೆಯಾಗಿದೆ.
ಪ್ರಯಾಣಿಕರನ್ನು ತಡೆ ಹಿಡಿದು ತಪಾಸಣೆ ನಡೆಸಿದಾಗ ಅವರು ಧರಿಸಿರುವ ಜೋಡಿ ಶೂಗಳ ಅಡಿಭಾಗದ ಒಳಗೆ ಮತ್ತು ಚಾಕೊಲೇಟ್ ಬಾಕ್ಸ್‌ಗಳು ಮತ್ತು ಬೆಡ್‌ಸ್ಪ್ರೆಡ್ ಪ್ಯಾಕೆಟ್‌ಗಳ ಒಳಗೆ ಚಿನ್ನವನ್ನು ಮರೆಮಾಡಲಾಗಿತ್ತು. ಇವರಿಂದ ಒಟ್ಟು 60,07,800 ಮೌಲ್ಯದ 969 ಗ್ರಾಂ. ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಅಕ್ರಮ ಚಿನ್ನ ಸಾಗಣೆ ಮಾಡುತ್ತಿದ್ದ ಮೂವರು ಪ್ರಯಾಣಿಕರನ್ನು ಮತ್ತು ಚಿನ್ನವನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಲಾಗಿದೆ.
ಇದನ್ನೂ ಓದಿ: ಮಂಗಳೂರು ಏರ್ಪೋರ್ಟ್ನಲ್ಲಿ ₹14 ಲಕ್ಷದ ಚಿನ್ನ ಜಪ್ತಿ, ಪ್ರಯಾಣಿಕ ವಶಕ್ಕೆ
ಇದೇ ತರಹ ಸೆಪ್ಟೆಂಬರ್ ತಿಂಗಳಿನಲ್ಲಿ ದುಬೈನಿಂದ ಮಂಗಳೂರಿಗೆ ಏರ್ ಇಂಡಿಯಾ ವಿಮಾನದಲ್ಲಿ ಬಂದಿಳಿದಿದ್ದ ಪ್ರಯಾಣಿಕನಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನ ವಶಪಡಿಸಿಕೊಳ್ಳಲಾಗಿತ್ತು. ರಟ್ಟಿನ ಪೆಟ್ಟಿಗೆಯ ಒಳಭಾಗದಲ್ಲಿ ನಾಲ್ಕು ನೀಲಿ ಬಣ್ಣದ ದಪ್ಪದ ಕಾಗದದ ಹಾಳೆಗಳನ್ನು ಇರಿಸಿದ್ದು ಅದರ ಎರಡು ಪದರಗಳ ನಡುವೆ ಚಿನ್ನದ ಪೌಡರ್ ಅಡಗಿಸಿಡಲಾಗಿತ್ತು. ಕಸ್ಟಮ್ಸ್ ಅಧಿಕಾರಿಗಳು ಅಕ್ರಮ ಪತ್ತೆ ಹಚ್ಚಿ, ಬಚ್ಚಿಟ್ಟ 242 ಗ್ರಾಂ ಚಿನ್ನದ ಪುಡಿಯನ್ನು ವಶಪಡಿಸಿಕೊಂಡಿದ್ದರು. ಇದರ ಮೌಲ್ಯ 14.50 ಲಕ್ಷ ರೂಪಾಯಿ ಆಗಿತ್ತು. ಅಧಿಕಾರಿಗಳು ಪ್ರಯಾಣಿಕನನ್ನು ವಶಕ್ಕೆ ಪಡೆದಿದ್ದರು.
ಇನ್ನು ಜನವರಿ ತಿಂಗಳ ಪ್ರಾರಂಭದ 18 ದಿನಗಳಲ್ಲಿ ವಿವಿಧ ಪ್ರಯಾಣಿಕರಿಂದ ಒಟ್ಟು ಬರೋಬ್ಬರಿ 2 ಕೋಟಿ ಮೌಲ್ಯದ ಚಿನ್ನ ವಶಪಡಿಸಿಕೊಳ್ಳಲಾಗಿತ್ತು. ದುಬೈ ಮತ್ತು ಅಬುಧಾಬಿಯಿಂದ ಬಂದ ಎಂಟು ಪುರುಷ ಪ್ರಯಾಣಿಕರಿಂದ ಈ ಅಕ್ರಮ ಚಿನ್ನ ಸಾಗಣೆ ಪತ್ತೆಯಾಗಿತ್ತು. ಈ ಪುರುಷ ಪ್ರಯಾಣಿಕರು ಟ್ರಾಲಿ ಬ್ಯಾಗ್‌ನ ಬೀಡಿಂಗ್‌ನಲ್ಲಿ, ಪ್ರಯಾಣಿಕ ಧರಿಸಿದ ಡಬಲ್ ಲೇಯರ್ಡ್ ವೆಸ್ಟ್ (ಬನಿಯನ್) ಒಳಗೆ, ಪೇಸ್ಟ್ ರೂಪದಲ್ಲಿ, ಬಾಯಿಯ ಕುಳಿಯಲ್ಲಿ ಮತ್ತು ಗುದನಾಳದಲ್ಲಿ ವಿವಿಧ ವಿಧಾನಗಳ ಮೂಲಕ ಚಿನ್ನವನ್ನು ಕಳ್ಳಸಾಗಣೆ ಮಾಡಿದ್ದರು.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೊದಲಿಗಿಂತಲೂ ಹೆಚ್ಚಿನ ಭದ್ರತೆ ಹೆಚ್ಚಿಸಲಾಗಿದೆ. ಅಲ್ಲದೆ ಕಳ್ಳಸಾಗಣೆ ನಿರ್ವಹಣೆಗೆ ವಿಶೇಷ ಕಣ್ಗಾವಲು ವ್ಯವಸ್ಥೆ, ವಿಲೇವಾರಿ ಸ್ಕ್ವಾಡ್ ಉಪಕರಣಗಳು ಇದೆ. ಇಷ್ಟಿದ್ದರು ಬೇರೆ ಬೇರೆ ರೀತಿಯಲ್ಲಿ ಅಕ್ರಮ ಚಿನ್ನ ಸಾಗಿಸುವ ಕೆಲಸ ಮಾತ್ರ ಮುಂದುವರೆಸುತ್ತಲೇ ಇದ್ದಾರೆ.