ಮಂಗಳೂರು : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಣೆ ಮಾಡುತ್ತಿದ್ದ ವ್ಯಕ್ತಿಯನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ವ್ಯಕ್ತಿಯಿಂದ 20 ಲಕ್ಷ ಮೌಲ್ಯದ 24 ಕ್ಯಾರೆಟ್ನ 347 ಗ್ರಾಂ ಚಿನ್ನವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ದುಬೈನಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಪ್ರಯಾಣಿಕನೋರ್ವ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ. ಈ ವೇಳೆ ಕಸ್ಟಮ್ಸ್ ಅಧಿಕಾರಿಗಳು ಈತನನ್ನು ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭ ಚಿನ್ನವನ್ನು ಬಿಳಿ ಪೌಡರ್ ರೂಪಕ್ಕೆ ಪರಿವರ್ತಿಸಿ 5 ಪ್ಯಾಕೆಟ್‌ಗಳಲ್ಲಿ ತುಂಬಿಸಿ 'ಕಿಚನ್ ಟ್ರೆಸರ್ಸ್ ಮತ್ತು 'ಕೀರ್‌ಮಿಕ್ಸ್' ಎಂಬ ಲೇಬಲ್ ಹಾಕಿ ಸಾಗಣೆ ಮಾಡುತ್ತಿರುವುದು ಪತ್ತೆಯಾಗಿದೆ. ತಕ್ಷಣ ಕಸ್ಟಮ್ಸ್ ಅಧಿಕಾರಿಗಳು ಚಿನ್ನದೊಂದಿಗೆ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.
ಇತ್ತೀಚಿನ ಪ್ರಕರಣ- ಗುದನಾಳದಲ್ಲಿ ಚಿನ್ನ ಸಾಗಣೆ ಮಾಡುತ್ತಿದ್ದ ಮಹಿಳೆ : ಕಳೆದ ಅಕ್ಟೋಬರ್ 4ರಂದು ಗುದನಾಳದಲ್ಲಿ ಚಿನ್ನವನ್ನು ಬಚ್ಚಿಟ್ಟುಕೊಂಡು ಸಾಗಿಸುತ್ತಿದ್ದ ಮಹಿಳೆಯನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದರು.
ಅಕ್ಟೋಬರ್ 4 ರಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಫ್ಲೈಟ್ IX 814 ಮೂಲಕ ದುಬೈನಿಂದ ಮಂಗಳೂರಿಗೆ ಆಗಮಿಸಿದ್ದ ಮಹಿಳೆ ಅಕ್ರಮವಾಗಿ ಚಿನ್ನವನ್ನು ಸಾಗಿಸುತ್ತಿದ್ದಳು. ಈ ವೇಳೆ ಮಹಿಳೆಯನ್ನು ತಡೆದು ಪರೀಕ್ಷಿಸಿದಾಗ ಯಂತ್ರದಲ್ಲಿ ಶಬ್ದ ಉಂಟಾಗಿತ್ತು. ಹೆಚ್ಚಿನ ಪರಿಶೀಲನೆ ನಡೆಸಿದಾಗ ಆಕೆಯ ದೇಹದಲ್ಲಿ ಚಿನ್ನ ಇರುವುದನ್ನು ಸೂಚಿಸಿತ್ತು. ವಿದೇಶದಿಂದ ಬಂದ ಮಹಿಳೆ ತನ್ನ ಗುದನಾಳದಲ್ಲಿ 2 ಗೋಳಾಕಾರದ ವಸ್ತುಗಳನ್ನು ಅಡಗಿಸಿಟ್ಟುಕೊಂಡು ಸಾಗಣೆ ಮಾಡುತ್ತಿರುವುದು ಈ ವೇಳೆ ಪತ್ತೆಯಾಗಿತ್ತು.
ಮಹಿಳೆಯಿಂದ 349 ಗ್ರಾಂ (ನಿವ್ವಳ) ತೂಕದ 24 ಕ್ಯಾರೆಟ್ ಶುದ್ಧತೆಯ ಚಿನ್ನವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಇದರ ಮೌಲ್ಯ ರೂ. 20,41,650 ರೂ. ಎಂದು ಅಂದಾಜಿಸಲಾಗಿತ್ತು. ಮಹಿಳೆಯನ್ನು ವಶಕ್ಕೆ ಪಡೆದುಕೊಂಡಿರುವ ಅಧಿಕಾರಿಗಳು ವಿಚಾರಣೆ ಮುಂದುವರಿಸಿದ್ದರು.
ಗುದನಾಳದಲ್ಲಿ ಚಿನ್ನದ ಬಿಸ್ಕೆಟ್ ಸಾಗಿಸುವಾಗ ಸಿಕ್ಕಿಬಿದ್ದ ವ್ಯಕ್ತಿ: ಕಳೆದ ಆಗಸ್ಟ್ ತಿಂಗಳಿನಲ್ಲಿ ಪ್ರಯಾಣಿಕನೋರ್ವ ಗುದನಾಳದಲ್ಲಿ ಚಿನ್ನದ ಬಿಸ್ಕೆಟ್ ಸಾಗಿಸುವಾಗ ಕಸ್ಟಮ್ಸ್ ಅಧಿಕಾರಿಗಳ ಬಲೆಗೆ ಬಿದ್ದಿದ್ದ. ಪ್ರಯಾಣಿಕನನ್ನು ಬಂಧಿಸಿದ ಕಸ್ಟಮ್ಸ್ ಅಧಿಕಾರಿಗಳು ಆತನಿಂದ 600 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದಿದ್ದರು. ಕೋಲ್ಕತ್ತಾದಿಂದ ಬೆಂಗಳೂರಿನ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ಪ್ರಯಾಣಿಕನನ್ನು ಅನುಮಾನದ ಮೇರೆಗೆ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಅಕ್ರಮವಾಗಿ ಚಿನ್ನವನ್ನು ಸಾಗಿಸುತ್ತಿರುವುದು ಬೆಳಕಿಗೆ ಬಂದಿತ್ತು.
ಇದನ್ನೂ ಓದಿ : ಗುದನಾಳದಲ್ಲಿ ಚಿನ್ನ ಬಚ್ಚಿಟ್ಟು ಸಾಗಿಸುತ್ತಿದ್ದ ಮಹಿಳೆ.. ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಚಾಲಾಕಿ