ಉಪ್ಪಿನಂಗಡಿ : ಅಕ್ರಮ ಗೋ ಸಾಗಾಟಕ್ಕೆ ಸಂಬಂಧಿಸಿ ಇಬ್ಬರನ್ನು ಹಾಗೂ ಅವರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ನಾಲ್ವರನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ ಘಟನೆ ಮೊಗ್ರುವಿನಲ್ಲಿ ನಡೆದಿದೆ.
ಅಕ್ರಮ ಗೋ ಸಾಗಾಟ ಹಿನ್ನೆಲೆಯಲ್ಲಿ ವಾಹನ ಚಾಲಕ ಬೆಳಾಲು ನಿವಾಸಿ ಹೊನ್ನಪ್ಪ ಗೌಡ (55), ಮೊಗ್ರು ಗ್ರಾಮದ ಮಾಪಲ ಮನೆಯ ಉಸ್ಮಾನ್ (60) ಎಂಬುವರನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದರು. ಅಲ್ಲದೆ ಹಲ್ಲೆ ನಡೆಸಿದ ಆರೋಪದಲ್ಲಿ ಬಂದಾರು ಗ್ರಾಮದ ನಿವಾಸಿ ಸಂತೋಷ್ ಪೂಜಾರಿ (30), ಕಣಿಯೂರು ಗ್ರಾಮದ ಧನರಾಜ್ (21), ಪದ್ಮುಂಜ ನಿವಾಸಿ ಲತೀಶ (20) ಮೋರ್ಜಾಲು ನಿವಾಸಿ ಶರತ್ (19) ಎಂಬುವರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಜಾನುವಾರುಗಳನ್ನು ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸಲಾಗುತ್ತಿದೆ ಎಂದು ಆರೋಪಿಸಿದ ಕೆಲವರು ಗುರುವಾರ ರಾತ್ರಿ ಮೊಗ್ರು ಜಂಕ್ಷನ್‍ನಲ್ಲಿ ವಾಹನವೊಂದನ್ನು ತಡೆದು ನಿಲ್ಲಿಸಿದ್ದರು. ಈ ಬಗ್ಗೆ ಮಾಹಿತಿ ತಿಳಿದು ತಕ್ಷಣವೇ ಉಪ್ಪಿನಂಗಡಿ ಪೊಲೀಸರು ಅಲ್ಲಿಗೆ ಧಾವಿಸಿದ್ದು, ಅಕ್ರಮ ಗೋ ಸಾಗಾಟಗಾರರನ್ನು ವಶಕ್ಕೆ ತೆಗೆದುಕೊಂಡಿದ್ದರು.
ಅಲ್ಲದೆ, ಗೋ ಸಾಗಾಟಗಾರರಿಗೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪದಲ್ಲಿ ನಾಲ್ವರನ್ನೂ ವಶಕ್ಕೆ ಪಡೆದರಲ್ಲದೆ, ಘಟನಾ ಸ್ಥಳದಲ್ಲಿದ್ದ ಬೈಕ್‍ಗಳನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ತಂದಿದ್ದರು. ಈ ಸಂದರ್ಭ ಅಕ್ರಮ ಗೋ ಸಾಗಾಟಗಾರರನ್ನು ತಡೆದವರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿರುವುದನ್ನು ವಿರೋಧಿಸಿ ಸುಮಾರು 200ರಷ್ಟು ಮಂದಿ ತಡರಾತ್ರಿ ಉಪ್ಪಿನಂಗಡಿ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದರು.
ಬಳಿಕ ಸ್ಥಳಕ್ಕೆ ಶಾಸಕ ಹರೀಶ್ ಪೂಂಜಾ, ನ್ಯಾಯವಾದಿ ಸುಬ್ರಹ್ಮಣ್ಯ ಅಗರ್ತ ಸೇರಿದಂತೆ ಹಲವರು ಠಾಣೆಗೆ ಆಗಮಿಸಿ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸದೆ ಬಿಡುವಂತೆ ಪಟ್ಟು ಹಿಡಿದರು. ಆದರೆ, ಒತ್ತಡಕ್ಕೆ ಮಣಿಯದ ಪೊಲೀಸರು ಅಕ್ರಮ ಗೋ ಸಾಗಾಟಗಾರರು ಹಾಗೂ ಹಲ್ಲೆಗೈದವರ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡರು.
ಈ ಬಗ್ಗೆ ಮಾತನಾಡಿದ ಉಪ್ಪಿನಂಗಡಿ ಠಾಣಾಧಿಕಾರಿ ನಂದಕುಮಾರ ಜಾನುವಾರುಗಳ ಸಾಗಾಣಿಕೆ ಬಗ್ಗೆ ದಾಖಲಾತಿಗಳನ್ನು ತೋರಿಸಿದ್ದರೆ ಅವರನ್ನು ಜಾಮೀನು ಮಂಜೂರು ಮಾಡಬಹುದಿತ್ತು. ಆದರೆ, ಅವರು ಅದನ್ನು ತೋರಿಸಿಲ್ಲ, ಸದ್ಯ ನಮ್ಮ ವಶದಲ್ಲಿದ್ದಾರೆ ಎಂದರು.