ಪುತ್ತೂರು: ತಾಲೂಕಿನ ಗಡಿ ಭಾಗ ಪಾಣಾಜೆ ಸಮೀಪ ಅಕ್ರಮವಾಗಿ ಕೇರಳಕ್ಕೆ ಸಾಗಿಸುತ್ತಿದ್ದ ಗೋವುಗಳನ್ನು ಸಂಪ್ಯ ಪೊಲೀಸರು ರಕ್ಷಿಸಿದ್ದಾರೆ.
ಕರ್ನಾಟಕ ನೋಂದಣಿಯ ವಾಹನದ ಮೂಲಕ ಗೋವುಗಳನ್ನು ಸಾಗಿಸಿ ಗಡಿ ಪ್ರದೇಶ ಗುರಿಕಲ್ಲು ಎಂಬಲ್ಲಿ ಕೇರಳ ನೋಂದಣಿಯ ವಾಹನಕ್ಕೆ ತುಂಬಿಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ 2 ವಾಹನಗಳು ಹಾಗೂ 4 ಗೋವುಗಳನ್ನು ವಶಕ್ಕೆ ಪಡೆದುಗೊಂಡಿದ್ದಾರೆ.
ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಕಾಸರಗೋಡು ಕುಂಬ್ಲೆ ಕಯಿಪ್ಪಾಡಿಯ ತೌಸೀಫ್, ಮೊಗ್ರಾಲ್ ನಿವಾಸಿ ಮೊಹಮ್ಮದ್, ಕುಂಬ್ಲೆಯ ಅಬ್ದುಲ್ಲಾ, ಆರ್ಲಪದವಿನ ಉಮ್ಮರ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಸಂಪ್ಯ ಪೊಲೀಸ್ ಠಾಣೆಯ ಎಸ್ಐ ಉದಯರವಿ ಮತ್ತು ತಂಡ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದಾಗ ಆರೋಪಿಗಳು ಕೇರಳ ನೋಂದಣಿ ವಾಹನದಲ್ಲಿ 3 ಜಾನುವಾರುಗಳನ್ನು ತುಂಬಿರುವುದು ಕಂಡು ಬಂದಿದೆ. ಅಲ್ಲದೆ ಅದೇ ವಾಹನಕ್ಕೆ ಕರುವೊಂದನ್ನು ತುಂಬಿಸಲು ಪ್ರಯತ್ನಿಸುತ್ತಿದ್ದಾಗ ಪೊಲೀಸರನ್ನು ನೋಡಿದ ಆರೋಪಿಗಳು ತಕ್ಷಣ ಕರುವನ್ನು ಸ್ಥಳದಲ್ಲಿಯೇ ಬಿಟ್ಟು ಕೇರಳದ ಕಡೆಗೆ ಪರಾರಿಯಾಗಿದ್ದಾರೆ.
ತನಿಖೆ ವೇಳೆ ಜಾನುವಾರುಗಳನ್ನು ಸಾಗಾಟ ಮಾಡಲು ಪರವಾನಗಿ ಮತ್ತು ಪಶು ವೈದ್ಯಾಧಿಕಾರಿಗಳ ಪ್ರಮಾಣಪತ್ರಗಳು ಇಲ್ಲದಿರುವುದು ಕಂಡು ಬಂದಿದೆ. ಜಾನುವಾರುಗಳನ್ನು ಆರ್ಲಪದವಿನ ಶ್ರೀನಿವಾಸ್ ಭಟ್ ಎಂಬುವರಿಂದ ಖರೀದಿ ಮಾಡಿ ಕರ್ನಾಟಕ ನೋಂದಣಿಯ ಪಿಕಪ್ ವಾಹನದಲ್ಲಿ ತುಂಬಿಸಿಕೊಂಡು ಬಂದು ಕೇರಳ ನೋಂದಣಿಯ ಪಿಕಪ್ ವಾಹನಕ್ಕೆ ತುಂಬಿಸಿ ಕೇರಳದ ಕಡೆಗೆ ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿರುವುದಾಗಿ ತಿಳಿದು ಬಂದಿದೆ.