ಬೆಳ್ತಂಗಡಿ: ಜನಪ್ರತಿನಿಧಿಗಳು ಅಭಿವೃದ್ಧಿಯ ಹರಿಕಾರರಾಗುವುದರೊಂದಿಗೆ ಸಾಂಸ್ಕೃತಿಕ ಸಂರಕ್ಷಣೆ ಹಾಗೂ ಪುನರುತ್ಥಾನದ ರಾಯಭಾರಿಗಳಾಗಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಭಾನುವಾರ ಉಜಿರೆಯಲ್ಲಿ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಗ್ರಾಮ ಪಂಚಾಯಿತಿ ಚುನಾಯಿತ ಸದಸ್ಯರು, ಕಾರ್ಯಕರ್ತರು ಮತ್ತು ಮತದಾರರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ರೈತರು ಅಭಿವೃದ್ಧಿಯಾದರೆ ಗ್ರಾಮದ ಅಭಿವೃದ್ಧಿಯಾಗುತ್ತದೆ. ತನ್ಮೂಲಕ ದೇಶದ ಪ್ರಗತಿಯಾಗುತ್ತದೆ ಎಂದರು.
ನರೇಗಾ ಯೋಜನೆಯಡಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ 800 ಕೋಟಿ ರೂಪಾಯಿ ಅನುದಾನ ಮಂಜೂರಾಗಿದೆ. ಜನಪ್ರತಿನಿಧಿಗಳು ಗ್ರಾಮೀಣ ಜನರ ಸಮಸ್ಯೆಗಳನ್ನು ಅರಿತು ಅವರಿಗೆ ಬೇಕಾದ ರಸ್ತೆ, ಕುಡಿಯುವ ನೀರು, ವಿದ್ಯುತ್, ಸ್ವಚ್ಛ ಪರಿಸರ ಮೊದಲಾದ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ಗ್ರಾಮ ರಾಜ್ಯದ ಮೂಲಕ ರಾಮ ರಾಜ್ಯದ ಕನಸು ನನಸಾಗಬೇಕು ಭಾರತೀಯ ಸಂಸ್ಕೃತಿಯ ಸಂರಕ್ಷಣೆಯಾಗಬೇಕು. ತಾಯಿ ಸಮಾನರಾದ ಗೋವುಗಳನ್ನು ಹತ್ಯೆ ಮಾಡುವವರ ಹಾಗೂ ಮಾತೃಸ್ಥಾನ ಹೊಂದಿರುವ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡುವವರ ಕೈಕಾಲುಗಳನ್ನು ಕಾನೂನುಬದ್ಧವಾಗಿ ಕಡಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಫೆಬ್ರವರಿ 8ರಿಂದ ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರಿಗೆ ತರಬೇತಿ ನೀಡಲಾಗುವುದು. ಮುಂದೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರುಗಳಿಗೂ ತರಬೇತಿ ನೀಡಲಾಗುವುದು. ಪ್ರತಿ ಗ್ರಾಮ ಪಂಚಾಯಿತಿಗೂ ಕನಿಷ್ಠ ಒಂದು ಕೋಟಿ ರೂಪಾಯಿ ಅನುದಾನ ನೀಡಲಾಗುವುದು ಎಂದರು.
ಸಚಿವ ಅಂಗಾರ ಮಾತನಾಡಿ, ಪಕ್ಷಕ್ಕೆ, ಕಾರ್ಯಕರ್ತರಿಗೆ ಮುಜುಗರ ಆಗುವಂತೆ ವರ್ತಿಸದೆ ಜನಪ್ರತಿನಿಧಿಗಳು ಕೆಲಸ ಮಾಡಬೇಕು. ಕೆಲಸದ ಹಿಂದೆ ನಮ್ಮ ಗಟ್ಟಿಯಾದ ವಿಚಾರಗಳ ಆಧಾರವೂ ಇದ್ದರೆ ಎಲ್ಲವೂ ಯಶಸ್ವಿಯಾಗುತ್ತದೆ ಎಂದು ಹೇಳಿದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಗ್ರಾಮ ಪಂಚಾಯಿತಿ ಸದಸ್ಯರು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹರಿಸಬೇಕು. ಎಲ್ಲರಿಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಸಲಹೆ ನೀಡಿದರು.