ಮಂಗಳೂರು: ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರೊಂದಿಗೆ ಈಗಾಗಲೇ ಮಾತನಾಡಿದ್ದೇನೆ. ಎಲ್ಲವೂ ಸರಿ ಹೋಗಿದೆ, ಪ್ರತಿಭಟನೆ ಕೈಬಿಟ್ಟಿದ್ದಾರೆ. ಅವರ ಕ್ಷೇತ್ರಕ್ಕೆ ಬೇಕಾಗಿರುವ ಅನುದಾನ ಬಿಡುಗಡೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದೇನೆ. ನಾಳೆ ಮಧ್ಯಾಹ್ನ ಅವರ ಜೊತೆಗೆ ಮಾತನಾಡುತ್ತೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ತಮ್ಮ ಧ್ವನಿಗೆ ಸರ್ಕಾರದಿಂದ ಯಾವುದೇ ಬೆಲೆ ಸಿಗುತ್ತಿಲ್ಲ. ರಿಸರ್ವ್ ಕ್ಷೇತ್ರ ಎಂದು ಮೂಡಿಗೆರೆ ಕ್ಷೇತ್ರ ಕಡೆಗಣನೆ ಆಗುತ್ತಿದೆ. ಸರ್ಕಾರವೇ ಈ ರೀತಿಯಲ್ಲಿ ತಾರತಮ್ಯ ಮಾಡಬಾರದೆಂದು ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿಯವರು ವಿಧಾನಸೌಧದ ಮುಂಭಾಗ ಇಂದು ಬೆಳಗ್ಗೆ ಧರಣಿ ಕುಳಿತಿದ್ದರು.
ಇದನ್ನೂ ಓದಿ:ನಮ್ಮ ಧ್ವನಿಗೆ ನಮ್ಮ ಸರ್ಕಾರದಲ್ಲೇ ಬೆಲೆ ಸಿಗ್ತಿಲ್ಲ: ಸರ್ಕಾರದ ವಿರುದ್ಧ ಬಿಜೆಪಿ ಶಾಸಕ ಏಕಾಂಗಿ ಧರಣಿ
ಸಾರ್ವಜನಿಕ ಸ್ಥಳಗಳಲ್ಲಿ ಗಾರ್ಡ್ ಆಫ್ ಹಾನರ್ ಕೊಡುವ ಅವಶ್ಯಕತೆ ಇಲ್ಲ:
ಏರ್ಪೋರ್ಟ್ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಗಾರ್ಡ್ ಆಫ್ ಹಾನರ್ ಕೊಡುವ ಅವಶ್ಯಕತೆ ಇಲ್ಲ. ಅಲ್ಲದೆ ಪ್ರತಿ ಬಾರಿ ಜಿಲ್ಲೆಗೆ ನಾನು ಭೇಟಿ ಕೊಟ್ಟಾಗಲೂ ಕೊಡುವ ಅವಶ್ಯಕತೆ ಇಲ್ಲ. ಈ ಬಗ್ಗೆ ನಾಳೆ ಬೆಂಗಳೂರಿಗೆ ಹೋದ ತಕ್ಷಣ ಆದೇಶ ನೀಡುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಆನಂದ್ ಸಿಂಗ್ ರಾಜೀನಾಮೆ ವಿಚಾರಕ್ಕೆ ಬಗ್ಗೆ ಪ್ರತಿಕ್ರಿಯೆ ನೀಡಿ, ಅವರು ಕೆಲವೊಂದು ವಿಚಾರಗಳನ್ನು ಹೇಳಿದ್ದಾರೆ. ಆ ವಿಚಾರಗಳನ್ನು ಪಕ್ಷದ ವರಿಷ್ಠರಿಗೆ ತಿಳಿಸಬೇಕೆಂದು ಹೇಳಿದ್ದಾರೆ. ಅದನ್ನು ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳುತ್ತೇನೆ ಎಂದರು.
ಇಂದಿರಾ ಕ್ಯಾಂಟೀನ್ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿಯವರು ಕಾಂಗ್ರೆಸ್ ಕಚೇರಿಯನ್ನು 'ಹುಕ್ಕಾ ಬಾರ್' ಬೇಕಾದರೂ ಮಾಡಿ ನಾವು ಇಂದಿರಾ ಕ್ಯಾಂಟೀನ್ ಅನ್ನು ಅನ್ನಪೂರ್ಣ ಕ್ಯಾಂಟೀನ್ ಮಾಡುತ್ತೇವೆ ಎಂದಿರುವ ಬಗ್ಗೆ ಪ್ರತಿಕ್ರಿಯಿಸಿ, ಸಿ ಟಿ ರವಿ ಅವರ ಅಭಿಪ್ರಾಯವನ್ನು ತಿಳಿಸಿದ್ದಾರೆ. ಸರ್ಕಾರದ ವತಿಯಿಂದ ನಾವು ತೀರ್ಮಾನ ಮಾಡುತ್ತೇವೆ ಎಂದು ಹೇಳಿದ್ರು.