ಮಂಗಳೂರು: ಸಮಾಜ ಕಲ್ಯಾಣ ಇಲಾಖೆಯು ಹದಿನೇಳು ಸಾವಿರ ಕೋಟಿ ರೂ. ಬೃಹತ್ ಮೊತ್ತವಿರುವ ಬಹಳ ಕಠಿಣವಾದ ಇಲಾಖೆ. ಬಹಳ ಸುಲಭವಾಗಿ ಅದರೊಳಗಿನ ಜಟಿಲತೆಯನ್ನು ಬಿಡಿಸೋದು ಕಷ್ಟ. ಎಂಥಹುದೇ ಕಷ್ಟವಾದರೂ ಅದರ ಒಂದೊಂದು ಪೈಸೆಯೂ ಕಡು ಬಡವನ ಮಗುವಿನ ಬದುಕಿಗೆ ಅವಕಾಶವಾಗುವ ರೀತಿಯಲ್ಲಿ ಈ ಇಲಾಖೆಯನ್ನು ಕಟ್ಟುತ್ತೇನೆ ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಭರವಸೆಯ ಮಾತುಗಳನ್ನಾಡಿದರು.
ಸಚಿವರಾದ ಬಳಿಕ ಮೊದಲ ಬಾರಿಗೆ ನಗರದ ಕೊಡಿಯಾಲಬೈಲ್ ನಲ್ಲಿರುವ ದ.ಕ.ಜಿಲ್ಲಾ ಬಿಜೆಪಿ ಕಚೇರಿಗೆ ಆಗಮಿಸಿ ಕಾರ್ಯಕರ್ತರ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಈ ಹಿಂದೆ ನಿರ್ವಹಿಸಿರುವ ಎರಡೂ ಇಲಾಖೆಯಲ್ಲಿ ಭ್ರಷ್ಟಾಚಾರವನ್ನು ಝೀರೋ ಪರ್ಸೆಂಟೇಜ್ ಗೆ ತಂದಿದ್ದೆ ಎಂಬ ಹೆಮ್ಮೆ ಇದೆ. ಇದು ನನ್ನ ವಿಶ್ವಾಸವನ್ನು ಹೆಚ್ಚಿಸಿದೆ ಎಂದು ಹೇಳಿದರು.
ಹಿಂದೆ ಕೂಲಿ ಮಾಡುವವರ ಮಕ್ಕಳು ಕೂಲಿ ಮಾಡಿಯೇ ಜೀವನ ನಿರ್ವಹಿಸಬೇಕೆಂಬ ಕಲ್ಪನೆಯಿತ್ತು. ಆದರೆ, ಈಗ ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಮಕ್ಕಳು ಕೂಡಾ ಸಮಾಜದಲ್ಲಿ ಉನ್ನತ ಹುದ್ದೆಯನ್ನು ಪಡೆಯುವ ಅವಕಾಶಗಳಿವೆ. ಸಮಾಜ ಕಲ್ಯಾಣ ಇಲಾಖೆಯು ಶ್ರಮ ವಹಿಸಿದಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಯ ಮಕ್ಕಳೂ ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಲು ಸಾಧ್ಯ ಎಂದು ಕೋಟ ಶ್ರೀನಿವಾಸ ಪೂಜಾರಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ವೇದವ್ಯಾಸ ಕಾಮತ್ ಅವರು ಕುಂದಾಪುರ ಕನ್ನಡದಲ್ಲಿಯೇ ಸಚಿವರಿಗೆ ಅಭಿನಂದನೆ ಕೋರಿ, ಅಂಬೇಡ್ಕರ್ ಭವನ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಕಾಲನಿಗಳಿಗೆ ಹೆಚ್ಚಿನ ಅನುದಾನವನ್ನು ಒದಗಿಸಬೇಕೆಂದು ವಿನಂತಿಸಿದರು.