ಮಂಗಳೂರು: ನಾನು ಕಾಂಗ್ರೆಸ್ ಟಿಕೆಟ್ಗೆ ಅರ್ಜಿ ಹಾಕಿಲ್ಲ, ಆಕಾಂಕ್ಷಿಯೂ ಅಲ್ಲ. ಆದರೆ ಹೈಕಮಾಂಡ್ ಬಳಿ ನನ್ನ ಹೆಸರೇ ಮುಂಚೂಣಿಯಲ್ಲಿದೆ ಎಂದು ಎಂ ಎನ್ ರಾಜೇಂದ್ರ ಕುಮಾರ್ ತಿಳಿಸಿದರು.
ನಗರದಲ್ಲಿ ಮಾತನಾಡಿದ ಅವರು, ನಾನು ಆಕಾಂಕ್ಷಿಯಲ್ಲದೆ ಇದ್ದರೂ ಮಂಗಳೂರು ಕ್ಷೇತ್ರದಲ್ಲಿ ಸ್ಪರ್ಧಿಸಲು ನನ್ನ ಹೆಸರು ಮುಂಚೂಣಿಯಲ್ಲಿದೆ. ಕಾಂಗ್ರೆಸ್ ನನಗೆ ಸಾಕಷ್ಟು ಸಹಾಯ ಮಾಡಿದೆ. ಆ ಕಾರಣದಿಂದ ಕಾಂಗ್ರೆಸ್ನಿಂದ ಟಿಕೆಟ್ ಕೊಟ್ಟರೆ ಸ್ಪರ್ಧಿಸುತ್ತೇನೆ ಎಂದು ತಿಳಿಸಿದರು.
ಜನಾರ್ದನ ಪೂಜಾರಿ ಅವರು ತನ್ನ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ರಾಜೇಂದ್ರ ಕುಮಾರ್, 2014 ರ ಲೋಕಸಭಾ ಚುನಾವಣೆಯಲ್ಲಿ ಜನಾರ್ದನ ಪೂಜಾರಿ ಸ್ಪರ್ಧಿಸಿದ್ದಾಗ ಅವರ ಪ್ರಚಾರ ಸಮಿತಿ ಅಧ್ಯಕ್ಷನಾಗಿದ್ದವನು ನಾನು. ಹಿರಿಯರಾದ ಅವರ ಬಗ್ಗೆ ಮಾತನಾಡುವುದಿಲ್ಲ ಎಂದರು.
ಸ್ಪರ್ದೆಗೆ ಅವಕಾಶ ಕೊಟ್ಟರೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುತ್ತೇನೆ. ನಾನು ಗೆದ್ದರೆ ಮಂಗಳೂರು ಜನತೆಯ ಹೆಮ್ಮೆ. ಬೇರೆಯವರಿಗೆ ಟಿಕೆಟ್ ಕೊಟ್ಟರೂ ಬೆಂಬಲ ಸೂಚಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.