ಮಂಗಳೂರು: ಕೊರೊನಾ ಭೀತಿಯಿಂದ ಇಡೀ ದೇಶವೇ ಲಾಕ್ಡೌನ್ ಆಗಿದೆ. ಈ ವೇಳೆ ಸಂಕಷ್ಟದಲ್ಲಿರುವ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ, ನಮ್ಮ ಕಾರ್ಯಕರ್ತರು ಹಾಗೂ ಮನಪಾ ಸದಸ್ಯರು ಕುಟುಂಬಗಳಿಗೆ ಬೇಕಾದ ದಿನನಿತ್ಯದ ಆಹಾರ ಸಾಮಾಗ್ರಿಗಳನ್ನು ವಿತರಿಸುತ್ತಿದ್ದಾರೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ.ಭರತ್ ಶೆಟ್ಟಿ ಹೇಳಿದ್ದಾರೆ.
ಈವರೆಗೂ ಸುಮಾರು 12,175 ಕಿಟ್ಗಳನ್ನು ವಿತರಿಸಿದ್ದು, ಉಚಿತ ಆ್ಯಂಬುಲೆನ್ಸ್ ವ್ಯವಸ್ಥೆ ಕೂಡಾ ಕಲ್ಪಿಸಲಾಗಿದೆ. ಸುಮಾರು 147 ಮಂದಿಯನ್ನು ಡಯಾಲಿಸಿಸ್ ಹಾಗೂ ಇತರ ಕಾಯಿಲೆಯಿಂದ ಬಳಲುತ್ತಿದ್ದವರನ್ನು ಅವರ ಮನೆಯಿಂದ ಕರೆದುಕೊಂಡು ಆಸ್ಪತ್ರೆಗೆ ಸೇರಿಸಿ, ಮನೆಗೆ ತಂದು ಬಿಡುವ ಕೆಲಸವನ್ನು ಮಾಡಿದ್ದೇವೆ. ಅಲ್ಲದೇ ಸುಮಾರು 2000 ಮಂದಿ ಹೊರ ರಾಜ್ಯದ ಕಾರ್ಮಿಕರಿಗೆ ಮಧ್ಯಾಹ್ನ, ರಾತ್ರಿ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಡಾ. ವೈ.ಭರತ್ ಶೆಟ್ಟಿ ತಿಳಿಸಿದ್ದಾರೆ.
ಕೊರೊನಾ ವೈರಸ್ ಹರಡದಂತೆ ತಡೆಯಲು ಮಾಸ್ಕ್ಗಳನ್ನು ನೀಡಲಿದ್ದು, ಸುಮಾರು 15000 ಮಾಸ್ಕ್ಗಳನ್ನು ಹಂಚುವ ಕೆಲಸ ಮಾಡಲಿದ್ದೇವೆ. ಈವರೆಗೂ 2000 ಮಾಸ್ಕ್ಗಳನ್ನು ಹಂಚಲಾಗಿದೆ. ಇನ್ನೂ 10,000 ಆಹಾರದ ಕಿಟ್ಗಳನ್ನು ತರಿಸುವ ಕೆಲಸ ನಡೆಯುತ್ತಿದ್ದು, ಎಲ್ಲಾ ಬೂತ್ಗಳ ಸಂಕಷ್ಟದಲ್ಲಿರುವ ಜನರಿಗೆ ತಲುಪಿಸುವ ಕೆಲಸವನ್ನು ಮಾಡುತ್ತೇವೆ. ಇಂತಹ ಕಠಿಣ ಸಂದರ್ಭದಲ್ಲೂ ಜನರ ಸೇವೆ ಮಾಡುತ್ತಿರುವ ಎಲ್ಲಾ ಪಕ್ಷದವರಿಗೂ ನನ್ನ ವೈಯುಕ್ತಿಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.