ಮಂಗಳೂರು: ಕೂಲಿ ಕಾರ್ಮಿಕ ಪತಿಯನ್ನು ಪತ್ನಿ ಉಸಿರುಗಟ್ಟಿಸಿ ಕೊಲೆಗೈದ ಘಟನೆ ನಗರದ ನಂತೂರು ಬಳಿ ನಡೆದಿದೆ. ಬಾಡಿಗೆ ಮನೆಯಲ್ಲಿ ವಾಸವಿದ್ದ ಗದಗ ಜಿಲ್ಲೆಯ ಇಟಗಿ ಗ್ರಾಮದ ನಿವಾಸಿ ಹನುಮಂತಪ್ಪ (39) ಕೊಲೆಯಾದವರು. ಗೀತಾ (34) ಬಂಧಿತ ಆರೋಪಿ.
ಹನುಮಂತಪ್ಪ ವಿಪರೀತ ಮದ್ಯಪಾನ ಮಾಡಿ ಮನೆಗೆ ಬಂದು ಪ್ರತಿದಿನ ಗಲಾಟೆ ಮಾಡಿ ಹಲ್ಲೆ ಮಾಡುತ್ತಿದ್ದನಂತೆ. ಜ.10ರ ರಾತ್ರಿ ಕುಡಿದು ಬಂದಿದ್ದ ಹನುಮಂತಪ್ಪ ಪತ್ನಿಯೊಂದಿಗೆ ಗಲಾಟೆ ಮಾಡಿದ್ದಾನೆ. ಮಕ್ಕಳೊಂದಿಗೆ ಊಟ ಮಾಡಿ ಮಲಗಿದ ನಂತರವೂ ಮಾತಿನ ಚಕಮಕಿ ಮುಂದುವರೆಸಿದ್ದಾನೆ. ಪತಿ, ಪತ್ನಿಯ ಮಧ್ಯೆ ಜಗಳ ತಾರಕಕ್ಕೇರಿದೆ. ಈ ಸಂದರ್ಭದಲ್ಲಿ ಹನುಮಂತಪ್ಪನ ಕುತ್ತಿಗೆಯನ್ನು ಪಂಚೆಯಿಂದ ಬಿಗಿದು ಗೀತಾ ಹತ್ಯೆ ಮಾಡಿದ್ದಾಳೆ. ಪತಿಯ ಹಿಂಸೆ ತಾಳಲಾರದೆ ಈ ಕೃತ್ಯ ಎಸಗಿರುವುದಾಗಿ ವಿಚಾರಣೆಯಲ್ಲಿ ತಿಳಿಸಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಶವ ಪರೀಕ್ಷೆಯಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಗೊತ್ತಾಗಿದೆ.
ಕತೆ ಕಟ್ಟಿದ್ದ ಆರೋಪಿ: ಹನುಮಂತ ಪೂಜಾರಿ ವಿಪರೀತ ಕುಡಿತದಿಂದ ಅಥವಾ ಯಾವುದೋ ಕಾಯಿಲೆಯಿಂದ ಮೃತಪಟ್ಟಿರುವುದಾಗಿ ಕದ್ರಿ ಪೊಲೀಸರಿಗೆ ಗೀತಾ ದೂರು ನೀಡಿದ್ದಳು. ಕುಡಿದು ಬಂದು ಮಲಗಿದ್ದ. ತಡರಾತ್ರಿ 2 ಗಂಟೆಗೆ ಹೊರಗಡೆ ಗೇಟಿನ ಬಳಿ ವಾಂತಿ ಮಾಡುತ್ತಾ ಮಾತನಾಡದ ಸ್ಥಿತಿಯಲ್ಲಿದ್ದ. ಅಣ್ಣನಿಗೆ ಕರೆ ಮಾಡಿ ವಿಷಯ ತಿಳಿಸಿದೆ. ಆತ ಬಂದ ಮೇಲೆ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಆದರೆ ಅಷ್ಟರಲ್ಲಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾಗಿ ಠಾಣೆಗೆ ನೀಡಿದ ದೂರಿನಲ್ಲಿ ಆರೋಪಿ ತಿಳಿಸಿದ್ದಳು.