ಬೆಳ್ತಂಗಡಿ(ದ.ಕ): ಕೋವಿಡ್ ಮಹಾಮಾರಿಗೆ ತುತ್ತಾಗಿ ಪತ್ನಿ ಕೊನೆಯುಸಿರೆಳೆದ ಕೇವಲ 18 ಗಂಟೆಗಳ ಅಂತರದಲ್ಲೇ ಪತಿಯೂ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ನೆರಿಯ ಗ್ರಾಮದಲ್ಲಿ ನಡೆದಿದೆ.
ನೆರಿಯ ಗ್ರಾಮದ ಪರಂದಾಡಿ ನಿವಾಸಿ ಸಾರಮ್ಮ (58) ಅವರು ಮಂಗಳೂರಿನ ವೆನ್ಲಾಕ್ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಜೂನ್ 22 ನೇ ಮಂಗಳವಾರ ಮೃತಪಟ್ಟರೆ, ಅವರ ಪತಿ ಇಬ್ರಾಹಿಂ(68) ಅವರು ಬುಧವಾರ ಬೆಳಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅಲ್ಲದೆ ಇದೀಗ ದಂಪತಿ ಪುತ್ರ ಅಬ್ದುಲ್ ಖಾದರ್ ಅವರಿಗೂ ಕೋವಿಡ್ ದೃಢಪಟ್ಟಿದೆ.
ಪರಂದಾಡಿ ಇಬ್ರಾಹಿಂ ಅವರ ಮನೆಯಲಿ ಸಾರಮ್ಮ ಅವರಿಗೆ ಮೊದಲು ಕೋವಿಡ್ ದೃಢಪಟ್ಟು ಅವರನ್ನು ಬೆಳ್ತಂಗಡಿ ಸರಕಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯಲಾಗಿತ್ತು. ಬಳಿಕ ಪತಿ ಇಬ್ರಾಹಿಂ ಅವರಿಗೂ ಕೋವಿಡ್ ದೃಢಪಟ್ಟಿತ್ತು. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ರೋಗ ಉಲ್ಬಣಗೊಂಡ ಪರಿಣಾಮ ಇಬ್ರಾಹಿಂ ಅವರು ಬುಧವಾರ ಸಾವನ್ನಪ್ಪಿದ್ದಾರೆ.
ಮೃತರ ಅಂತ್ಯಸಂಸ್ಕಾರ ನೆರಿಯ ಜುಮ್ಮಾ ಮಸ್ಜೀದ್ ದಫನ ಭೂಮಿಯಲ್ಲಿ ಕೋವಿಡ್ ನಿಯಮಾನುಸಾರ ನಡೆದಿದ್ದು, ಕರ್ನಾಟಕ ಮುಸ್ಲಿಂ ಜಮಾಅತ್ ಸಹಾಯ್ ಬೆಳ್ತಂಗಡಿ ಸರ್ಕಲ್ ತಂಡದ ಕಾರ್ಯಕರ್ತರು ನೆರವೇರಿಸಿದ್ದಾರೆ. ಮೃತ ದಂಪತಿಯ ಮಕ್ಕಳಾದ ಅಬೂಬಕ್ಕರ್, ಅಬ್ದುಲ್ ಖಾದರ್ ಮತ್ತು ರಫೀಕ್ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.
ಇದನ್ನೂ ಓದಿ: ಮಕ್ಕಳ ಅಶ್ಲೀಲ ವಿಡಿಯೋ ಶೇರ್: ಮಂಗಳೂರಲ್ಲಿ ಇಬ್ಬರ ವಿರುದ್ಧ ಪ್ರಕರಣ