ಉಳ್ಳಾಲ (ಮಂಗಳೂರು): ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರವೆಂಬ ತಾಲೂಕು ಆಸ್ಪತ್ರೆ ನಿರ್ಮಿಸಲಾಗಿದ್ದರೂ, ಈ ಆಸ್ಪತ್ರೆಯಲ್ಲಿ ಭಾರಿ ಪ್ರಮಾಣದ ಅವ್ಯವಸ್ಥೆ ಮತ್ತು ಕೊರತೆಯಿಂದಾಗಿ ಸರಿಸುಮಾರು 60 ಸಾವಿರದಷ್ಟು ಜನಸಂಖ್ಯೆ ಇರುವ ಉಳ್ಳಾಲ ನಗರದ ಜನಸಾಮಾನ್ಯರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ ಎಸ್ಡಿಪಿಐ ಆರೋಪಿಸಿದೆ.
ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಸಂಬಂಧಪಟ್ಟವರು ಈ ಸಮಸ್ಯೆಗಳನ್ನು ಸರಿಪಡಿಸಿ ಸಾರ್ವಜನಿಕರಿಗೆ ನೆರವಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಎಸ್ಡಿಪಿಐ ರಾಜ್ಯ ಮುಖಂಡ ಅಕ್ರಂ ಹಸನ್ ಹೇಳಿದ್ದಾರೆ.
ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ, ವೈದ್ಯರು, ನರ್ಸ್ ಮತ್ತು ಸಿಬ್ಬಂದಿಯನ್ನು ಅಗತ್ಯಕ್ಕನುಗುಣವಾಗಿ ನೇಮಿಸಲಾಗಿಲ್ಲ. ಹೆರಿಗೆ ಕೇಂದ್ರದಲ್ಲಿ ಹೆರಿಗೆ ಕೊಠಡಿಯ ವ್ಯವಸ್ಥೆ ಮಾಡಲಾಗಿಲ್ಲ. ಅನುಭವಿ ಸಿಬ್ಬಂದಿಯನ್ನು ನೇಮಿಸಲಾಗಿಲ್ಲ ಎಂದು ಅವರು ಆರೋಪಿಸಿದರು.
ಬೃಹತ್ ಕಟ್ಟಡ ಹೊಂದಿರುವ ತಾಲೂಕು ಆಸ್ಪತ್ರೆಯಲ್ಲಿ ಇದುವರೆಗೆ ಆ್ಯಂಬ್ಯುಲೆನ್ಸ್ ವ್ಯವಸ್ಥೆ ಮಾಡದಿರುವುದರಿಂದ ಆ್ಯಂಬ್ಯುಲೆನ್ಸ್ಗಾಗಿ ಬೇರೆಯವರನ್ನು ಆಶ್ರಯಿಸಬೇಕಾದ ಪರಿಸ್ಥಿತಿಯಿದೆ. ಸುಸಜ್ಜಿತ ಲ್ಯಾಬೊರೇಟರಿ ಇಲ್ಲ. ತಜ್ಞರು, ಲ್ಯಾಬ್ ಟೆಸ್ಟ್ ಟೆಕ್ನಿಷಿಯನ್ ನೇಮಿಸಲಾಗಿಲ್ಲ. ಹಾಗೆಯೇ ಕೇಂದ್ರೀಕೃತ ಫಾರ್ಮಸಿಯ ವ್ಯವಸ್ಥೆ ಆಗಿಲ್ಲ ಎಂದು ಹೇಳಿದರು.