ಮಂಗಳೂರು: ಕೋವಿಡ್ ಹಾವಳಿ ಬಳಿಕ ಆರೋಗ್ಯ ಕಾರ್ಯಕರ್ತರು ಒತ್ತಡಗಳ ನಡುವೆ ಬಿಡುವಿಲ್ಲದೇ ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಗ್ರಾಮೀಣ ಭಾಗದಲ್ಲಿ ಆರೋಗ್ಯ ಕಾರ್ಯಕರ್ತರು ಕೊರೊನಾ ವೈರಸ್ ಹಾವಳಿ ಹಿನ್ನೆಲೆ ನಾಲ್ಕು ''ಟಿ''ಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಗ್ರಾಮೀಣ ಭಾಗದ ಆರೋಗ್ಯ ಕಾರ್ಯಕರ್ತರು ಕೊರೊನಾ ವೈರಸ್ ಹಿನ್ನೆಲೆ ನಾಲ್ಕು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ. ಅವುಗಳೆಂದರೆ ಟೆಸ್ಟಿಂಗ್, ಟ್ರೇಸಿಂಗ್, ಟ್ರ್ಯಾಕಿಂಗ್, ಟ್ರೀಟಿಂಗ್. ಇವುಗಳನ್ನು ಇಲ್ಲಿ ನಾಲ್ಕು ಟಿ ಎಂದು ಕರೆಯಲಾಗುತ್ತದೆ.
ಗ್ರಾಮೀಣ ಭಾಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಕಾರ್ಯಕರ್ತರು ಆಯಾ ಪ್ರದೇಶದಲ್ಲಿ ಯಾರಿಗಾದರೂ ಸೋಂಕಿನ ರೋಗ ಲಕ್ಷಣಗಳಿವೆಯಾ? ಎಂದು ಪತ್ತೆ ಹಚ್ಚುತ್ತಾರೆ. ರೋಗ ಲಕ್ಷಣ ಇರುವವರ ಗಂಟಲು ದ್ರವ ತೆಗೆದು ತಾಲೂಕು ಕೇಂದ್ರಕ್ಕೆ ಕಳುಹಿಸುತ್ತಾರೆ. ತಾಲೂಕು ಕೇಂದ್ರದಿಂದ ಜಿಲ್ಲಾಸ್ಪತ್ರೆಗೆ ಈ ಮಾದರಿ ಬಂದು ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಇಲ್ಲಿ ಆ ವ್ಯಕ್ತಿಗೆ ಕೊರೊನಾ ಪಾಸಿಟಿವ್ ದೃಢಪಟ್ಟರೆ ಆಯಾ ತಾಲೂಕು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಾಹಿತಿ ರವಾನೆಯಾಗಿ ಆ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸುವುದೋ ಅಥವಾ ಹೋಂ ಐಸೋಲೇಷನ್ನಲ್ಲಿ ಇರಿಸಬೇಕೇ ಎಂಬುದನದ್ನು ತೀರ್ಮಾನ ಮಾಡುತ್ತಾರೆ.
ಹೋಂ ಐಸೋಲೇಷನ್ನಲ್ಲಿ ಇರುವವರಿಗೆ ವಿಟಮಿನ್ ಸಿ, ಜಿಂಕ್ ಮೊದಲಾದ ಔಷಧಿಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರದ ಮೂಲಕ ನೀಡಲಾಗುತ್ತದೆ. ಇದರ ಜತೆಗೆ ಪಾಸಿಟಿವ್ ಬಂದ ವ್ಯಕ್ತಿಗಳ ಪ್ರಾಥಮಿಕ ಸಂಪರ್ಕಿತರ ಪರೀಕ್ಷೆಯನ್ನು ಮಾಡಲಾಗುತ್ತದೆ.
ಇದನ್ನೂ ಓದಿ: ರಾಜಧಾನಿಗೆ ತೌಕ್ತೆ ಎಫೆಕ್ಟ್: ಎರಡು ದಿನ ಭಾರೀ ಮಳೆ ಸಾಧ್ಯತೆ
ಕೊರೊನಾ ಮೊದಲ ಅಲೆಯಲ್ಲಿ ನಗರ ಭಾಗದಲ್ಲಿ ವ್ಯಾಪಕವಾಗಿದ್ದ ಸೋಂಕು ಎರಡನೇ ಅಲೆಯ ವೇಳೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಜಾಸ್ತಿಯಾಗಿ ಪತ್ತೆಯಾಗುತ್ತಿದೆ. ಹಾಗಾಗಿ ಗ್ರಾಮೀಣ ಭಾಗದ ಆರೋಗ್ಯ ಕಾರ್ಯಕರ್ತರು ಈ ನಾಲ್ಕು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ.