ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ, ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬಿಬಿಎಂಪಿ ಮಾರ್ಶಲ್ಸ್ ಮಾದರಿಯಲ್ಲಿ ಮನಪಾ ವ್ಯಾಪ್ತಿಯಲ್ಲಿ ಹೋಂಗಾರ್ಡ್ಗಳನ್ನು ಬಳಸಿಕೊಂಡು ಜಾಗೃತಿ ಅಭಿಯಾನ ಮಾಡಲಾಗುತ್ತಿದೆ ಎಂದು ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದರು.
ನಗರದ ವೆನ್ಲಾಕ್ ಆಸ್ಪತ್ರೆಯ ಆಯುಷ್ ವಿಭಾಗದಲ್ಲಿ ಎರಡನೇ ಸುತ್ತಿನ ಲಸಿಕೆ ಪಡೆದು ಮಾತನಾಡಿದ ಅವರು, ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಯವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿ ಜಾಗೃತಿ ಅಭಿಯಾನಕ್ಕೆ ಶೇ.30ರಷ್ಟು ಹೋಂಗಾರ್ಡ್ಗಳ ನಿಯೋಜನೆಗೆ ಅನುಮತಿ ಕೋರಲಾಗಿದೆ ಎಂದು ಹೇಳಿದರು.
ಈ ಅಭಿಯಾನವನ್ನು ಆರಂಭದಲ್ಲಿ ಮಂಗಳೂರು ನಗರವ್ಯಾಪ್ತಿಯಲ್ಲಿ ಅನುಸರಿಸಿ ಆ ಬಳಿಕ ಜಿಲ್ಲೆಯ ಇತರೆಡೆಗೂ ವಿಸ್ತರಿಸಲಾಗುತ್ತದೆ. ಜನಸಂದಣಿ ಇರುವ ಪ್ರದೇಶಗಳು, ಗಡಿಭಾಗ, ಸಭೆ ಸಮಾರಂಭಗಳಲ್ಲಿ ಈ ಹೋಂಗಾರ್ಡ್ಗಳು ಜಾಗೃತಿ ಮೂಡಿಸುವ, ಪರಿಶೀಲನೆ ನಡೆಸುವ ಕಾರ್ಯ ಮಾಡಲಿದ್ದಾರೆ. ಅಲ್ಲದೆ ಬಸ್ ತಂಗುದಾಣಗಳಲ್ಲಿ ಬಸ್ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ ಎಂದರು.
ಇದನ್ನೂ ಓದಿ: ಗುಜ್ಜರಕೆರೆ ಜಲಶುದ್ಧೀಕರಣಕ್ಕೆ 'ಆಕ್ಸಿಡೇಷನ್ ಪಾಂಡ್': ಜಿಲ್ಲಾಡಳಿತ ಚಿಂತನೆ
ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ದೇವಾಲಯಗಳ ಅರ್ಚಕರು ಸೇರಿದಂತೆ ಸಿಬ್ಬಂದಿಗೂ ಲಸಿಕೆ ನೀಡುವ ಕಾರ್ಯ ಹಮ್ಮಿಕೊಳ್ಳಲಾಗಿದೆ. ಇವರು ಯಾವುದೇ ಆನ್ಲೈನ್ ಬುಕ್ಕಿಂಗ್ ಮಾಡದೆ ನೇರವಾಗಿ ಲಸಿಕಾ ಕೇಂದ್ರಗಳಿಗೆ ತೆರಳಿ ಲಸಿಕೆ ಹಾಕಿಸಿಕೊಳ್ಳಬಹುದು. ಜೊತೆಗೆ ವೃದ್ಧಾಶ್ರಮಗಳಂತಹ ಕಡೆಗಳಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟವರು 30ಕ್ಕಿಂತ ಹೆಚ್ಚು ಮಂದಿ ಇದ್ದಲ್ಲಿ ಅವರಿಗೆ ಕೆಎಸ್ಆರ್ಟಿಸಿ ಬಸ್ ಮೂಲಕ ಲಸಿಕಾ ಕೇಂದ್ರಗಳಿಗೆ ಅವರನ್ನು ಕರೆದೊಯ್ದು ಲಸಿಕೆ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲಾಡಳಿತದ ಮುತುವರ್ಜಿಯಿಂದ ಕಾಲೇಜು, ಹಾಸ್ಟೆಲ್ಗಳಲ್ಲಿ ಕೊರೊನಾ ತಪಾಸಣೆ ಮಾಡಲಾಗುತ್ತಿದೆ. ಈಗಾಗಲೇ 100ಕ್ಕಿಂತ ಅಧಿಕ ಕಾಲೇಜು, ಹಾಸ್ಟೆಲ್ಗಳಲ್ಲಿ ತಪಾಸಣೆ ಕಾರ್ಯ ಮಾಡಲಾಗಿದೆ. ಸೋಂಕು ಪತ್ತೆಯಾದವರಲ್ಲಿ ಒಂದೆರಡು ಪ್ರಕರಣ ಹೊರತುಪಡಿಸಿ ಉಳಿದವರೆಲ್ಲರು ಪ್ರಾಥಮಿಕ ಸೋಂಕಿನ ಲಕ್ಷಣವುಳ್ಳವರಾಗಿದ್ದಾರೆ. ಆದ್ದರಿಂದ ಸಾರ್ವಜನಿಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಡಾ.ಕೆ.ವಿ.ರಾಜೇಂದ್ರ ಹೇಳಿದರು.