ಕಡಬ (ದಕ್ಷಿಣ ಕನ್ನಡ) : ಜಿಲ್ಲೆಯ ಸುಳ್ಯ ಮತ್ತು ಕಡಬ ತಾಲೂಕಿನ ಹಲವೆಡೆ ಮೇಘ ಸ್ಫೋಟ ಉಂಟಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಭಾರಿ ಮಳೆಗೆ ಇಲ್ಲಿನ ಹಲವು ಗ್ರಾಮಗಳು ದ್ವೀಪದಂತಾಗಿದೆ. ನಿನ್ನೆ ಸುರಿದ ಭಾರಿ ಮಳೆಗೆ ಸುಬ್ರಹ್ಮಣ್ಯದ ಕುಮಾರಧಾರ ಪರ್ವತಮುಖಿಯಲ್ಲಿ ಮನೆ ಮೇಲೆ ಗುಡ್ಡಕುಸಿದು ಕುಸುಮಧಾರ ಮತ್ತು ರೂಪಾಶ್ರೀ ದಂಪತಿಯ ಮಕ್ಕಳಾದ ಶೃತಿ (11) ಮತ್ತು ಜ್ಞಾನಶ್ರೀ (6) ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದಾರೆ. ಮೃತದೇಹಗಳನ್ನು ಕಡಬ ಸಮುದಾಯ ಆಸ್ಪತ್ರೆಯಲ್ಲಿ ಇರಿಸಲಾಗಿದೆ.
ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ನಿನ್ನೆ ರಾತ್ರಿಯೇ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಇಂದು ಮುನ್ನೆಚ್ಚರಿಕಾ ಕ್ರಮವಾಗಿ ಕಡಬ, ಸುಳ್ಯ ತಾಲೂಕಿನಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಜೊತೆಗೆ ಕುಕ್ಕೆ ಸುಬ್ರಮಣ್ಯಕ್ಕೆ ಭಕ್ತರು ಭೇಟಿ ನೀಡದಂತೆ ವಿನಂತಿ ಮಾಡಿಕೊಳ್ಳಲಾಗಿದೆ.
ಭಾರಿ ಮಳೆಗೆ ಕಿರು ಸೇತುವೆಗಳು ಮುಳುಗಡೆಗೊಂಡಿದ್ದು, ಇಲ್ಲಿನ ಗ್ರಾಮಗಳಿಗೆ ಹೊರಗಿನ ಸಂಪರ್ಕ ಕಡಿತವಾಗಿದೆ. ವಿದ್ಯುತ್ ಸಂಪರ್ಕ ಕಡಿತಗೊಂಡು ಜನರು ಪರದಾಡುವಂತಾಗಿದೆ. ಸದ್ಯ ಸ್ಥಳದಲ್ಲಿ ಎನ್.ಡಿ.ಆರ್.ಎಫ್ ಮತ್ತು ಎಸ್.ಡಿ.ಆರ್.ಎಫ್ ಪಡೆಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಓದಿ : ಸುಬ್ರಮಣ್ಯದಲ್ಲಿ ಭಾರಿ ಮಳೆ: ಮನೆ ಮೇಲೆ ಗುಡ್ಡ ಕುಸಿದು ಇಬ್ಬರು ಮಕ್ಕಳು ಸಾವು