ಮಂಗಳೂರು: ದೇಶದಲ್ಲಿ ಪಿಎಫ್ಐ ನಿಷೇಧಿಸಿದಂತೆ ಎಸ್ಡಿಪಿಐ ಮತ್ತು ಮದರಸಗಳನ್ನು ನಿಷೇಧಿಸಿ ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಆಗ್ರಹಿಸಿದರು.
ಮಂಗಳೂರಿನಲ್ಲಿ ಮಾತನಾಡಿದ ಅವರು ಪಿಎಫ್ಐ ಮತ್ತು ಅದರ ಸಹವರ್ತಿ ಸಂಘಟನೆಗಳನ್ನು ಕೇಂದ್ರ ಸರ್ಕಾರ ನಿಷೇಧ ಮಾಡಿರುವಾಗ ಪಿಎಫ್ಐನ ರಾಜಕೀಯ ಪಕ್ಷವಾದ ಎಸ್ಡಿಪಿಐಯನ್ನು ನಿಷೇಧ ಮಾಡದಿರುವುದು ಯಾಕೆ? ಮುಂದಿನ ಚುನಾವಣೆ ರಾಜಕೀಯಕ್ಕಾಗಿ ಲಾಭ ಪಡೆಯಲು ಎಸ್ಡಿಪಿಐಯನ್ನು ನಿಷೇಧ ಮಾಡದೇ ಇರುವ ಬಗ್ಗೆ ಅನುಮಾನಗಳಿದೆ. ಎಸ್ಡಿಪಿಐ ಮತ್ತು ಓವೈಸಿ ಪಕ್ಷವನ್ನು ಚುನಾವಣೆಗಾಗಿ ಬಿಜೆಪಿ ಬಳಸುತ್ತಿದೆ. ಎಸ್ಡಿಪಿಐ ನಿಷೇಧ ಮಾಡದೇ ಇರುವುದು ಬೇಸರದ ಸಂಗತಿ ಎಂದರು.
ಅದೇ ರೀತಿ ಮದರಸಗಳನ್ನು ನಿಷೇಧಿಸಬೇಕು. ಈ ರೀತಿ ಮಾಡಿದರೆ ಹಿಂದೂ ರಾಷ್ಟ್ರ ನಿರ್ಮಾಣವಾಗಲಿದೆ ಎಂದ ಅವರು, ಬಿಜೆಪಿ ಎಂಬುದು ಭ್ರಷ್ಟ ಜನರ ಪಕ್ಷವಾಗಿದೆ. ಅದು ಹಿಂದೂ ಪಕ್ಷವಲ್ಲ. ಕೇವಲ ಬೂಟಾಟಿಕೆ ಮಾಡುತ್ತಿದೆ ಎಂದು ಟೀಕಿಸಿದರು.
ಇದೇ ವೇಳೆ ಮಾತನಾಡಿದ ಅಖಿಲ ಭಾರತ ಹಿಂದೂ ಮಹಾಸಭಾದ ಮುಖಂಡ ಧರ್ಮೇಂದ್ರ ಅವರು, ಪಿಎಫ್ಐಗೆ ವಕ್ಫ್ ಬೋರ್ಡ್ನಿಂದ ಹಣ ಸಂದಾಯವಾಗುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ವಕ್ಫ್ ಬೋರ್ಡ್ ಎಸ್ಡಿಪಿಐ, ಕಾಂಗ್ರೆಸ್ ಅಧೀನದಲ್ಲಿ ಇಲ್ಲ. ರಾಜ್ಯ ಬಿಜೆಪಿ ಸರ್ಕಾರದ ಅಧೀನದಲ್ಲಿದೆ. ಅದರ ಮೂಲಕ ಹಣ ಸಂದಾಯವಾಗುತ್ತಿರುವುದು ಬೇಸರ ವಿಚಾರ. ತಾಕತ್ತಿದ್ದರೆ ಬಿಜೆಪಿ ಸರ್ಕಾರ ವಕ್ಫ್ ಬೋರ್ಡ್ನ್ನು ತಕ್ಷಣ ನಿಷೇಧ ಮಾಡಲಿ ಎಂದು ಸವಾಲು ಹಾಕಿದರು.
ಆರ್ಎಸ್ಎಸ್ ಬಗ್ಗೆ ಹೇಳಿಕೆ ನೀಡುವ ಸಿದ್ದರಾಮಯ್ಯ ಅವರು ಈ ರೀತಿ ಮಾತನಾಡಿದರೆ ಬಹಳ ಕಷ್ಟವಾದೀತು. ಆರ್ಎಸ್ಎಸ್ನ ಪಾದದ ಧೂಳಿಗೂ ಅವರು ಸಮವಲ್ಲ. ಆರ್ಎಸ್ಎಸ್ ಪ್ರಶ್ನಾತೀತ ಎಂದರು.
ಇದನ್ನೂ ಓದಿ: ಮಂಗಳೂರು: ಪಿಎಫ್ಐ ಸೇರಿದಂತೆ 12 ಕಚೇರಿಗಳಿಗೆ ಬೀಗಮುದ್ರೆ