ಬಂಟ್ವಾಳ: ಕೆಜೆ ಹಳ್ಳಿ ಹಾಗೂ ಡಿಜೆ ಹಳ್ಳಿಯಲ್ಲಿ ಆರಕ್ಷಕ ಠಾಣೆ ಮತ್ತು ಸಾರ್ವಜನಿಕ ಆಸ್ತಿ ಧ್ವಂಸಗೊಳಿಸಿ, ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಸಂಘಟನೆಗಳನ್ನು ನಿಷೇಧಿಸುವಂತೆ ಒತ್ತಾಯಿಸಿ ಹಿಂದೂ ಜಾಗರಣಾ ವೇದಿಕೆ ಪ್ರತಿಭಟನೆ ನಡೆಸಿದೆ.
ವಿಟ್ಲ ತಾಲೂಕು ಘಟಕದ ವತಿಯಿಂದ ನಗರದಲ್ಲಿರುವ ಮಿನಿ ವಿಧಾನಸೌಧದ ಮುಂಭಾಗ ಜಮಾಯಿಸಿದ ಸಂಘಟನಾಕಾರರು ಪ್ರತಿಭಟನೆ ನಡೆಸಿದರು.
ಈ ವೇಳೆ ಹಿಂದೂ ಜಾಗರಣ ವೇದಿಕೆಯ ಸಂಪರ್ಕ ಪ್ರಮುಖ್ ನರಸಿಂಹ ಮಾಣಿ ಮಾತನಾಡಿ, ಅನ್ಯ ಧರ್ಮೀಯರ ವಿರುದ್ಧ ದ್ವೇಷಕಾರುತ್ತ ಸರ್ಕಾರಿ ಆಸ್ತಿ ಪಾಸ್ತಿಗಳನ್ನು ಧ್ವಂಸ ಮಾಡಿ ಸಾರ್ವಜನಿಕರ ಪ್ರಾಣಕ್ಕೆ ಕುತ್ತು ತಂದಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾಗಿರುವ ಮತಾಂಧ ಮತ್ತು ಭಯೋತ್ಪಾದಕತೆಗೆ ಕುಮ್ಮಕ್ಕು ನೀಡುತ್ತಿರುವ ಸಂಘಟನೆಗಳನ್ನು ತಕ್ಷಣವೇ ಸರ್ಕಾರ ನಿಷೇಧಿಸಬೇಕು. ಈ ಘಟನೆಯಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಕೂಡಲೇ ಗೂಂಡಾ ಕಾಯ್ದೆಯಡಿ ಬಂಧಿಸಬೇಕೆಂದು ಒತ್ತಾಯಿಸಿದರು.
ಬಳಿಕ ವಿಭಾಗದ ಮಾತೃ ಸುರಕ್ಷಾ ಸಂಯೋಜಕ ಗಣರಾಜ ಭಟ್ ಕೆದಿಲ ಮಾತನಾಡಿ, ಮಹಮ್ಮದ್ ಅಲಿ ಜಿನ್ನಾ ಕನಸು ನನಸು ಮಾಡುವ ಪೂರ್ವ ನಿಯೋಜಿತ ಕೃತ್ಯ ಮಾಡಲಾಗಿದೆ ಎಂದು ದೂರಿದರು. ಬಳಿಕ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಸಂಘಟನೆಯ ಪ್ರಮುಖರಾದ ರವಿರಾಜ್ ಬಿ.ಸಿ.ರೋಡು, ರತ್ನಾಕರ ಶೆಟ್ಟಿ, ರಾಜರಾಮ್ ಭಟ್, ಬಾಲಕೃಷ್ಣ, ಜಗದೀಶ್, ಪ್ರಶಾಂತ್ ಕೆಂಪುಗುಡ್ಡೆ, ಗಣೇಶ್ ಕುಲಾಲ್ ಕೆದಿಲ, ಅರುಣ್ ಕುಲಾಲ್ ಸಜೀಪ, ಆರ್ ಎಸ್ ಎಸ್ ನ ಚೇತನ್ ಕುಮಾರ್ ಮೊದಲಾದವರು ಹಾಜರಿದ್ದರು.