ಮಂಗಳೂರು: ಮರಗಳ ಸಹಿತ ಭಾರೀ ಗುಡ್ಡ ಕುಸಿತ ಉಂಟಾದ ಪರಿಣಾಮ ಬೃಹತ್ ಗಾತ್ರದ ಬಂಡೆಯೊಂದು ಹೆದ್ದಾರಿ ಸಮೀಪ ಅಪಾಯಕಾರಿಯಾಗಿ ನಿಂತಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 169ರ ಗುರುಪುರ ಪೇಟೆಯ ಬಳಿ ನಡೆದಿದೆ.
ಇತ್ತೀಚೆಗೆ ಸುರಿದ ಧಾರಾಕಾರ ಗಾಳಿ-ಮಳೆಗೆ ಹೆದ್ದಾರಿ ಪಕ್ಕದ ಗುಡ್ಡ ಸಂಪೂರ್ಣ ಕುಸಿದಿದೆ. ಪರಿಣಾಮ ಮಣ್ಣಿನೊಂದಿಗೆ ಬೃಹತ್ ಗಾತ್ರದ ಬಂಡೆಯೂ ಕುಸಿದು ಅಪಾಯಕಾರಿ ಸ್ಥಿತಿಯಲ್ಲಿದೆ.
ಮತ್ತೆ ಮಳೆ ಬಿದ್ದು ಗುಡ್ಡ ಕುಸಿತವಾದಲ್ಲಿ ಬಂಡೆ ನೇರವಾಗಿ ಹೆದ್ದಾರಿಗೆ ಬೀಳುವ ಸಾಧ್ಯತೆ ಇದೆ. ಒಂದೊಮ್ಮೆ ಬಂಡೆ ಉರುಳಿದರೆ ಹೆದ್ದಾರಿ ವಾಹನ ಸಂಚಾರವು ತಾಸುಗಟ್ಟಲೆ ಸ್ಥಗಿತಗೊಳ್ಳಲಿದೆ.
ಕಳೆದ ವಾರ ಗುಡ್ಡದ ಕೆಲವು ಮರಗಳ ರೆಂಬೆ-ಕೊಂಬೆಗಳು ಹೆದ್ದಾರಿಗೆ ಬಿದ್ದಿದ್ದವು. ಸಾರ್ವಜನಿಕರಿಂದ ಮರ ತೆರವಿನ ವೇಳೆ ಹೆದ್ದಾರಿಯಲ್ಲಿ ಒಂದು ತಾಸು ವಾಹನ ಸಂಚಾರ ಸ್ಥಗಿತಗೊಂಡಿತ್ತು.
‘ಜೆಸಿಬಿ ಬಳಸಿ ಖಾಲಿ ಜಾಗಕ್ಕೆ ಈ ಬಂಡೆ ಸರಿಸಿದರೆ ಅಪಾಯ ತಪ್ಪಿಸಲು ಸಾಧ್ಯ. ಇಲ್ಲವಾದರೆ ಮತ್ತೊಂದು ಬಾರಿ ಹೆದ್ದಾರಿ ವಾಹನ ಸಂಚಾರಕ್ಕೆ ಅಡಚಣೆಯಾಗಲಿದೆ’ ಎಂದು ಗುರುಪುರ ನಾಗರಿಕರೊಬ್ಬರು ಹೇಳಿದರು.
‘ಈ ವಿಷಯದಲ್ಲಿ ಮಾಹಿತಿ ಸಿಕ್ಕಿದ್ದು, ಮೇಲಾಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಹೆದ್ದಾರಿಗೆ ಅಪಾಯವಿದ್ದರೆ ಬಂಡೆ ತೆರವಿಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು’ ಎಂದು ರಾಷ್ಟ್ರೀಯ ಹೆದ್ದಾರಿ ವಿಭಾಗದ (ಮಂಗಳೂರು) ಸಹಾಯಕ ಇಂಜಿನಿಯರ್ ಮುರುಗೇಶ್ ಹೇಳಿದ್ದಾರೆ.