ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಕಾಲೇಜಿನಲ್ಲಿ ಹಿಜಾಬ್ ವಿವಾದ ಭುಗಿಲೆದ್ದ ಬಳಿಕ, ಇದೀಗ ಕಾಲೇಜು ನೋಟಿಸ್ ಬೋರ್ಡ್ನಲ್ಲಿ ಸಮವಸ್ತ್ರ ವಿಚಾರಕ್ಕೆ ಸಂಬಂಧಿಸಿದಂತೆ ಸೂಚನಾ ಪತ್ರವನ್ನು ಹಾಕಲಾಗಿದೆ. ಮೇ 17 ರಂದು ಕಾಲೇಜು ಆರಂಭವಾಗುವ ಮೊದಲ ದಿನ ವಿದ್ಯಾರ್ಥಿಗಳಿಗೆ ಮೊಬೈಲ್ ಮೂಲಕ ಸಂದೇಶವನ್ನು ಕಳುಹಿಸಿ ಹಿಜಾಬ್ ಧರಿಸದಂತೆ ಸೂಚಿಸಲಾಗಿತ್ತು. ವಿದ್ಯಾರ್ಥಿನಿಯರು ಈ ವಿಷಯವಾಗಿ ವಿಚಾರಿಸಿದ ಬಳಿಕ, ಸಿಂಡಿಕೇಟ್ ಸಭೆಯ ನಿರ್ಣಯದಂತೆ ಇದನ್ನು ಮಾಡಲಾಗಿದೆ ಎಂದು ಹೇಳಲಾಗಿತ್ತು. ಕಾಲೇಜಿಗೆ ಬಂದ ಮುಸ್ಲಿಂ ವಿದ್ಯಾರ್ಥಿನಿಯರಿಗೆ ತರಗತಿಗೆ ಪ್ರವೇಶ ನೀಡಲಾಗಿರಲಿಲ್ಲ. ಗುರುವಾರ ಹಿಜಾಬ್ ಧರಿಸಿದ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಪ್ರವೇಶಿಸಲು ಅವಕಾಶ ನೀಡಬಾರದು ಎಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಇದಾದ ನಂತರ ಕ್ಯಾಂಪಸ್ ನೋಟಿಸ್ ಬೋರ್ಡ್ನಲ್ಲಿ ಸಮವಸ್ತ್ರಕ್ಕೆ ಸಂಬಂಧಿಸಿದಂತೆ ಸೂಚನಾ ಪತ್ರ ಅಳವಡಿಸಲಾಗಿದೆ.
ಈ ಸೂಚನಾ ಪತ್ರದಲ್ಲಿ, ದಿ. 24-05-22 ರ ಮಂಗಳವಾರದಂದು ಕಾಲೇಜು ವಿಭಾಗದ ಮುಖ್ಯಸ್ಥರ ಸಭೆಯ ನಿರ್ಣಯದಂತೆ, ವಿದ್ಯಾರ್ಥಿನಿಯರು ಕಾಲೇಜಿಗೆ ಬಂದ ನಂತರ ಮಹಿಳಾ ವಿಶ್ರಾಂತಿ ಕೊಠಡಿಗೆ ತೆರಳಿ ತಮ್ಮ ಶಿರವಸ್ತ್ರವನ್ನು ತೆಗೆದು, ಕಾಲೇಜಿನ ವಠಾರದಲ್ಲಿ ಸಮವಸ್ತ್ರ ಹೊರತುಪಡಿಸಿ ಬೇರೆ ಯಾವುದೇ ಉಡುಪುಗಳನ್ನು ಧರಿಸಲು ಅನುಮತಿ ಇರುವುದಿಲ್ಲ. ಈ ನಿಯಮವನ್ನು ಉಲ್ಲಂಘಿಸಿದ್ದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಬರೆಯಲಾಗಿದೆ. ಈ ಸೂಚನಾ ಪತ್ರಕ್ಕೆ ಪ್ರಾಂಶುಪಾಲರು ಸಹಿಯನ್ನು ಹಾಕಿದ್ದಾರೆ.
ಈ ವಿಚಾರವಾಗಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು ಮಾತನಾಡಿ, ಎಬಿವಿಪಿ ಪಿತೂರಿಯಿಂದ ಹಿಜಾಬ್ ಧರಿಸುವವರ ವಿರುದ್ಧ ಪ್ರತಿಭಟನೆ ನಡೆಸಲಾಗಿದೆ. ನಮ್ಮ ಕಾಲೇಜಿನಲ್ಲಿ ಹಿಜಾಬ್ ವಿಚಾರದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಕಾಲೇಜ್ ಪ್ರಾಸ್ಪೆಕ್ಟಸ್ನಲ್ಲಿಯೂ ಹಿಜಾಬ್ ಧರಿಸಲು ಅನುಮತಿ ಇದೆ. ಅದನ್ನು ಒಪ್ಪಿ ನಾವು ಬಂದಿದ್ದೇವೆ. ಈ ಮಧ್ಯೆ ಹೈಕೋರ್ಟ್ ಆದೇಶ ಎಂದು ಬಲವಂತವಾಗಿ ಹಿಜಾಬ್ ಧರಿಸದಂತೆ ಒತ್ತಡ ಹೇರಲಾಗಿದೆ. ಆದರೆ ಹೈಕೋರ್ಟ್ ಆದೇಶದಲ್ಲಿ ಎಲ್ಲಿಯೂ ಇದು ಡಿಗ್ರಿಗೆ ಅನ್ವಯಿಸುತ್ತದೆ ಎಂದು ಹೇಳಿಲ್ಲ.
ಇದನ್ನೂ ಓದಿ: ಮಂಗಳೂರು ವಿವಿ ಕಾಲೇಜಿನಲ್ಲಿ ಹಿಜಾಬ್ಗೆ ಅವಕಾಶ ನೀಡಬೇಡಿ: ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆ
ಒಂದೂವರೆ ವಾರದಿಂದ ನಮ್ಮನ್ನು ತರಗತಿಗೆ ಬಿಡುತ್ತಿಲ್ಲ. ಇಂದು ಲೈಬ್ರೆರಿಗೆ ಕೂಡ ಬಿಟ್ಟಿಲ್ಲ. ರಾತ್ರೋರಾತ್ರಿ ಹಿಜಾಬ್ ಧರಿಸದಂತೆ ಅನಧಿಕೃತ ಸಂದೇಶ ಕಳುಹಿಸಿದ್ದಾರೆ. ಅದನ್ನು ಮರುದಿನ ಪ್ರಾಂಶುಪಾಲರಲ್ಲಿ ವಿಚಾರಿಸಿದಾಗ ಸಿಂಡಿಕೇಟ್ನಲ್ಲಿ ತೀರ್ಮಾನವಾಗಿದ್ದು, ವಿಸಿ ಜೊತೆ ಮಾತನಾಡಲು ತಿಳಿಸಿದ್ದರು. ವಿಸಿ ಜೊತೆಗೆ ಮಾತನಾಡಿದಾಗ ಜಿಲ್ಲಾಧಿಕಾರಿ ಅವರಲ್ಲಿ ಮಾತನಾಡಲು ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಅವರಲ್ಲಿ ಮಾತನಾಡಿದಾಗ ಸೋಮವಾರದವರೆಗೆ ಕಾಲವಕಾಶ ಕೇಳಿದ್ದಾರೆ. ಇದರ ಹಿಂದೆ ಎಬಿವಿಪಿ ಪಿತೂರಿ ಮಾಡಿದೆ ಎಂದು ಹಿಜಾಬ್ ಧರಿಸುವ ವಿದ್ಯಾರ್ಥಿನಿಯರು ಆರೋಪ ಮಾಡಿದ್ದಾರೆ.