ಮಂಗಳೂರು: ಇತ್ತೀಚೆಗೆ ಪಿಯು ಮತ್ತು ಡಿಗ್ರಿ ಕಾಲೇಜುಗಳಲ್ಲಿ ಹಿಜಾಬ್ ಧರಿಸುವ ವಿಚಾರದಲ್ಲಿ ವಿವಾದಗಳು ಉಂಟಾದ ಹಿನ್ನೆಲೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಸ್ಲಿಂ ವ್ಯಕ್ತಿಗಳು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳಿಂದ ಪಿಯು ಕಾಲೇಜುಗಳನ್ನು ಪ್ರಾರಂಭಿಸಲು ಅನುಮತಿಗಾಗಿ ಅರ್ಜಿಯನ್ನು ಸಲ್ಲಿಸಲಾಗಿದೆ. ಈ ವರ್ಷದಲ್ಲಿ ಪಿಯು ಕಾಲೇಜು ಆರಂಭಿಸಲು 14 ಸಂಸ್ಥೆಗಳು ಅರ್ಜಿ ಸಲ್ಲಿಸಿದೆ. ಇದರಲ್ಲಿ 13 ಮುಸ್ಲಿಂ ವ್ಯಕ್ತಿಗಳು ನಡೆಸುತ್ತಿರುವ ಶಾಲೆಗಳಿಂದ ಅರ್ಜಿ ಸಲ್ಲಿಸಲಾಗಿದೆ. ಇದು ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಆದ ಬೆಳವಣಿಗೆ ಎಂದು ಹೇಳಲಾಗುತ್ತಿದೆ.
ಸರ್ಕಾರದಿಂದ ನಡೆಸುವ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಲು ಅವಕಾಶ ಇಲ್ಲ. ಕ್ಯಾಂಪಸ್‌ನಲ್ಲಿ ಹುಡುಗಿಯರು ಹಿಜಾಬ್ ಧರಿಸುವುದನ್ನು ಮುಂದುವರಿಸಲು ಮುಸ್ಲಿಂ ಹೆಣ್ಣುಮಕ್ಕಳನ್ನು ತಮ್ಮದೇ ಸಮುದಾಯದ ಸಂಸ್ಥೆಗಳಿಗೆ ಸೇರಿಸಲು ಪೋಷಕರು ಆಸಕ್ತರಾಗಿದ್ದಾರೆ. ಈ ಹಿನ್ನೆಲೆ ಮುಸ್ಲಿಂ ಶಿಕ್ಷಣ ಸಂಸ್ಥೆಗಳು ಅರ್ಜಿ ಸಲ್ಲಿಸಿ ಅನುಮತಿಗೆ ಕಾಯುತ್ತಿವೆ ಎಂದು ಹೇಳಲಾಗ್ತಿದೆ.
ಇದನ್ನೂ ಓದಿ: ಮಂಗಳೂರು ಏರ್ಪೋರ್ಟ್ಗೆ ಬಂದಿದ್ದ ಮಂಕಿಪಾಕ್ಸ್ ಸೋಂಕಿತ: ಕಡಲೂರಲ್ಲಿ ಕಟ್ಟೆಚ್ಚರ
ದಕ್ಷಿಣ ಕನ್ನಡ ಪಿಯು ಇಲಾಖೆ ಉಪನಿರ್ದೇಶಕ ಸಿ.ಡಿ.ಜಯಣ್ಣ ಮಾತನಾಡಿ, ಈ ಶೈಕ್ಷಣಿಕ ವರ್ಷದಲ್ಲಿ ಪಿಯು ಕಾಲೇಜುಗಳನ್ನು ಆರಂಭಿಸಲು ಅನುಮತಿ ಕೋರಿ ಜಿಲ್ಲೆಯ ಒಟ್ಟು 14 ಸಂಸ್ಥೆಗಳು ಅರ್ಜಿ ಸಲ್ಲಿಸಿವೆ. ಆದರೆ, ಇಲ್ಲಿಯವರೆಗೆ ಕೇವಲ ಎರಡು ಸಂಸ್ಥೆಗಳಿಗೆ ಅನುಮತಿ ನೀಡಲಾಗಿದೆ. ಇನ್ನುಳಿದ 12 ಅರ್ಜಿಗಳು ಬಾಕಿ ಉಳಿದಿದ್ದು, ಅವರು ಇನ್ನೂ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕಾಗಿದೆ. ಗುರುಪುರ ಬಳಿಯ ಸಹರಾ ಪಿಯು ಕಾಲೇಜಿಗೆ ಮತ್ತು ಸುಬ್ರಹ್ಮಣ್ಯ ಸಮೀಪದ ಕುಮಾರಸ್ವಾಮಿ ಪಿಯು ಕಾಲೇಜಿಗೆ ಪಿಯು ಕಾಲೇಜು ಆರಂಭಿಸಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.