ಬೆಂಗಳೂರು : ಮಂಗಳೂರಿನ ಪಚ್ಚನಾಡಿ ಘನತ್ಯಾಜ್ಯ ಭೂಭರ್ತಿ ಘಟಕದಿಂದ ಬಿಡುಗಡೆಯಾದ ಕಲುಷಿತ ನೀರು ಫಲ್ಗುಣಿ ನದಿ ಹಾಗೂ ಮರವೂರು ಜಲಾಶಯ ಸೇರಿ, ಅದೇ ನೀರನ್ನು ಸುತ್ತಲಿನ ಗ್ರಾಮಗಳ ಜನ ಕುಡಿಯುವ ಪರಿಸ್ಥಿತಿ ಸೃಷ್ಟಿ ಮಾಡುವ ಮೂಲಕ ಮಂಗಳೂರು ನಗರ ಪಾಲಿಕೆಯು ಸಂವೇದನೆ ರಹಿತವಾಗಿ ನಡೆದುಕೊಂಡಿದೆ ಎಂದು ಹೈಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ.
ಘಟನೆ ಸಂಬಂಧ ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಸಿಜೆ ಎಸ್ ಸಿ ಶರ್ಮಾ ನೇತೃತ್ವದ ವಿಭಾಗೀಯ ಪೀಠ ಮಂಗಳೂರು ಪಾಲಿಕೆ ವಿರುದ್ಧ ತೀವ್ರ ಅಸಮಾಧಾನ ಹೊರ ಹಾಕಿದೆ. ಶುದ್ಧ ಕುಡಿಯುವ ನೀರು ಪ್ರತಿಯೊಬ್ಬರ ಹಕ್ಕು. ಆದರೆ, ಫಲ್ಗುಣಿ ನದಿಯಲ್ಲಿ ವಿಷಕಾರಿ ಅಂಶ ಪತ್ತೆಯಾಗಿದೆ.
ಭೂಭರ್ತಿ ಘಟಕದಿಂದ ಹರಿದ ತ್ಯಾಜ್ಯ ನೀರು ಸೇರಿರುವ ಕಾರಣಕ್ಕೆ ನದಿ ನೀರು ವಿಷಪೂರಿತವಾಗಿದೆ. ಆ ನೀರನ್ನು ಸುತ್ತಲಿನ ಗ್ರಾಮದ ಜನ ಕುಡಿಯುತ್ತಿದ್ದಾರೆ ಎಂದು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ತನ್ನ ವರದಿಯಲ್ಲಿ ತಿಳಿಸಿದೆ. ಜನ ಕಲುಷಿತ ನೀರು ಕುಡಿಯುತ್ತಿರುವುದನ್ನು ನೋಡಿಕೊಂಡು ಮೂಕ ಪ್ರೇಕ್ಷಕನಂತೆ ಕೂರಲು ನ್ಯಾಯಾಲಯಕ್ಕೆ ಸಾಧ್ಯವಿಲ್ಲ ಎಂದು ಪಾಲಿಕೆಗೆ ಚಾಟಿ ಬೀಸಿದೆ.
ಅಲ್ಲದೆ, ಪಚ್ಚನಾಡಿ ಭೂಭರ್ತಿ ಘಟಕದಲ್ಲಿ ಬಹಳ ದಿನಗಳಿಂದ ಉಳಿದಿರುವ ತ್ಯಾಜ್ಯವನ್ನು ಸ್ಥಳಾಂತರಿಸಲು ಸರ್ಕಾರವು 72 ಕೋಟಿ ರೂ. ಮಂಜೂರು ಮಾಡಿದೆ. ಈ ಹಣ ಬಳಸಿಕೊಂಡು ಪಾಲಿಕೆ ಕೂಡಲೇ ತ್ಯಾಜ್ಯವನ್ನು ಸ್ಥಳಾಂತರಿಸಬೇಕು. ಸ್ಥಳಾಂತರ ಕಾರ್ಯದ ಪ್ರಗತಿ ವರದಿಯನ್ನು ಪ್ರತಿ ತಿಂಗಳು ಸಲ್ಲಿಸಬೇಕು. ಮಂಗಳೂರು ಜನತೆಗೆ ಶುದ್ಧ ಕುಡಿಯುವ ನೀರಿನ ಪೂರೈಕೆ ಬಗ್ಗೆಯೂ ವರದಿ ಸಲ್ಲಿಸಬೇಕು ಎಂದು ತಾಕೀತು ಮಾಡಿದೆ.
ಕುಡಿಯುವ ನೀರು ವಿಷ ಪೂರಿತ ಆಗಿರುವುದು ಅತ್ಯಂತ ಗಂಭೀರ ವಿಚಾರ. ಇದಕ್ಕೆ ಜವಾಬ್ದಾರಿಯಾಗಿರುವ ಅಧಿಕಾರಿಗಳ ವಿರುದ್ಧ ಈವರೆಗೂ ಪ್ರಾಸಿಕ್ಯೂಷನ್ ಕ್ರಮ ಜರುಗಿಸದಿದ್ದರೆ, ಆ ನಿಟ್ಟಿನಲ್ಲಿ ಕೆಎಸ್‌ಪಿಸಿಬಿ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ನಿರ್ದೇಶಿಸಿದೆ. ಹಾಗೆಯೇ, ಮಂಗಳೂರಿನ ಮುಗ್ರೋಡಿ ಕನ್‌ಸ್ಟ್ರಕ್ಷನ್ಸ್ ಕಂಪನಿಯು ಫಲ್ಗುಣಿ ನದಿ ನೀರನ್ನು ಪರೀಕ್ಷಿಸಿ ಮತ್ತು ವಿಶ್ಲೇಷಿಸಿ ಸಲ್ಲಿಸಿದ್ದ ವರದಿಯನ್ನು ಸ್ವೀಕರಿಸಲು ಪೀಠ ತಿರಸ್ಕರಿದೆ.