ಮಂಗಳೂರು: ದ.ಕ. ಜಿಲ್ಲೆಯಲ್ಲಿ ಹೆಲಿಟೂರಿಸಂ ನಡೆಸುವ ಬಗ್ಗೆ ಜನಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಲಾಗುತ್ತಿದೆ. ಈ ಮೂಲಕ ಎನ್ಎಂಪಿಟಿಗೆ ಬರುವ ವಿದೇಶಿ ಪ್ರಯಾಣಿಕರಿಗೆ ಹೆಲಿಕಾಫ್ಟರ್ ವ್ಯವಸ್ಥೆ ಮಾಡಿ ಅವರಲ್ಲಿನ 14-15 ಗಂಟೆಯ ಸಮಯವನ್ನು ಉತ್ತಮವಾಗಿ ವ್ಯಯ ಮಾಡುವ ರೀತಿಯಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಹೇಳಿದರು.
ನಗರದ ಲೇಡಿಹಿಲ್ನ ಪ್ರೆಸ್ ಕ್ಲಬ್ನಲ್ಲಿ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಗರದಲ್ಲಿ ಬೀಚ್ಗಳನ್ನು ವರ್ಷದೊಳಗೆ ಉನ್ನತ ಮಟ್ಟಕ್ಕೆ ಏರಿಸುವ ಕಾರ್ಯ ಆಗುತ್ತದೆ. ಅಲ್ಲದೆ ಇಲ್ಲಿನ ಧಾರ್ಮಿಕ ಕ್ಷೇತ್ರಗಳು, ಅರಣ್ಯಗಳು ಹಾಗೂ ಜಲಪಾತಗಳನ್ನು ಸದ್ಬಳಕೆ ಮಾಡಿ ಜನಾಕರ್ಷಣಾ ಕೇಂದ್ರವಾಗಿ ಪರಿವರ್ತನೆ ಮಾಡಲು ಯೋಜನೆ ಕೈಗೊಳ್ಳಲಾಗಿದೆ. ಈ ಬಗ್ಗೆ ಮೊದಲ ಹಂತವಾಗಿ ಕಾಫಿ ಟೇಬಲ್ ಪುಸ್ತಕ ಮಾಡಲಾಗುತ್ತದೆ. ಜೊತೆಗೆ ಸಸಿಹಿತ್ಲು, ತಣ್ಣೀರುಬಾವಿ, ಪಣಂಬೂರು, ಸುರತ್ಕಲ್ ಮುಂತಾದ ಸಮುದ್ರ ತೀರಗಳಲ್ಲಿ ಅಂತರ್ ರಾಜ್ಯ ಟೆಂಡರ್ ಅನ್ನು ಮುಂದಿನ ತಿಂಗಳಲ್ಲಿ ಕರೆಯಲಾಗುತ್ತದೆ ಎಂದರು.
ಜಿಲ್ಲೆಯಲ್ಲಿ ಹೇರಳವಾಗಿ ಕೆಂಪುಕಲ್ಲು ದೊರಕುತ್ತಿದ್ದು, ಇದು ಪಟ್ಟಾ ಹಾಗೂ ಸರ್ಕಾರಿ ಸ್ಥಳಗಳಲ್ಲಿ ದೊರಕುತ್ತಿದೆ. ಆದರೆ ಸರ್ಕಾರಿ ಸ್ಥಳಗಳಲ್ಲಿ ಗಣಿಗಾರಿಕೆ ನಡೆಸಲು ಅವಕಾಶಗಳಿಲ್ಲ. ಪಟ್ಟಾ ಜಾಗಗಳಲ್ಲಿ ಗಣಿಗಾರಿಕೆ ಮಾಡಲು ಗಣಿ ಹಾಗೂ ಭೂವಿಜ್ಞಾನ ಇಲಾಖೆಯ ಪರವಾನಿಗೆ ಅಗತ್ಯವಿದೆ. ನಮ್ಮಲ್ಲಿ ಒಂದು ಕಡೆಗಳಲ್ಲಿ ಪರವಾನಿಗೆ ಪಡೆದು ವಿವಿಧ ಕಡೆಗಳಲ್ಲಿ ಗಣಿಗಾರಿಕೆ ನಡೆಸುತ್ತಿರುವುದು ಈಗಾಗಲೇ ನಮ್ಮ ಗಮನಕ್ಕೆ ಬಂದಿದೆ. ಕೆಲವೊಂದು ಸಂದರ್ಭಗಳಲ್ಲಿ ಹಿರಿಯ ಹಾಗೂ ಭೂವಿಜ್ಞಾನ ಇಲಾಖೆಯ ಅಧಿಕಾರಿಗಳ ವಲಯದಿಂದಲೇ ಪರವಾನಿಗೆ ದೊರಕಿರುತ್ತದೆ. ಆದರೆ ಈ ಮಾಹಿತಿ ಪೊಲೀಸ್, ಕಂದಾಯ ಇಲಾಖೆಗೆ ಅರಿವಿಗೆ ಬಂದಿಲ್ಲ. ಯಾರು ತಮ್ಮ ಸ್ವಂತ ಜಾಗಗಳಲ್ಲಿ ಪರವಾನಿಗೆ ಇಲ್ಲದೆ ಗಣಿಗಾರಿಕೆ ಮಾಡುತ್ತಿದ್ದಾರೋ ಅದನ್ನು ನಿಲ್ಲಿಸಿ ಸರ್ಕಾರಿ ಭೂಮಿಯಲ್ಲಿ ಅಕ್ರಮಗಳು ನಡೆಯದಂತೆ ಟಾಸ್ಕ್ ಫೋರ್ಸ್ ರಚಿಸಲಾಗುತ್ತದೆ ಎಂದರು.