ಮಂಗಳೂರು: ನಗರದಲ್ಲಿ 'ತೌಕ್ತೆ' ಚಂಡಮಾರುತದ ಪ್ರಭಾವದಿಂದಾಗಿ ಬೆಳ್ಳಂಬೆಳಗ್ಗೆಯೇ ಮಳೆ ಸುರಿಯಲಾರಂಭಿಸಿದೆ.
ನಿನ್ನೆ ಬೆಳಗ್ಗಿನಿಂದಲೇ ಸಮುದ್ರ ಭಾರೀ ಪ್ರಕ್ಷುಬ್ಧಗೊಂಡಿದ್ದು, ಅಲೆಗಳ ಅಬ್ಬರವೂ ಜೋರಾಗಿತ್ತು. ಸಂಜೆಯ ವೇಳೆಗೆ ಜೋರಾದ ಗಾಳಿ ಬೀಸುತ್ತಿದ್ದು, ಮೋಡ ಮುಸುಕಿದ ವಾತಾವರಣ ಕಂಡು ಬಂದಿತ್ತು. ತಡರಾತ್ರಿಯವರೆಗೆ ಮಳೆ ಸುರಿಯದಿದ್ದರೂ ಮುಂಜಾವಿನ ವೇಳೆಗೆ ಮಳೆ ಸುರಿಯಲಾರಂಭಿಸಿದೆ. ಮಳೆ ಬಿಡುವ ಲಕ್ಷಣ ಕಾಣದೆ ಇಂದೂ ಮುಂದುವರೆಯುವ ಸಾಧ್ಯತೆ ಇದೆ.
ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಇಂದು ಮಂಗಳೂರಿನಲ್ಲಿ ಭಾರೀ ಮಳೆ ಸುರಿಯುತ್ತಿದೆ. ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರವು ನಿನ್ನೆ ರಾಜ್ಯದ ಕರಾವಳಿ ಭಾಗಗಳಲ್ಲಿ ಮುಂದಿನ ಐದು ದಿನಗಳಲ್ಲಿ ಭಾರೀ ಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿತ್ತು. ಅಲ್ಲದೆ ಕರಾವಳಿ ಭಾಗದಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಿ, ಸಮುದ್ರಕ್ಕೆ ಯಾರೂ ಇಳಿಯದಂತೆ ಮುನ್ನೆಚ್ಚರಿಕೆ ನೀಡಿತ್ತು.
ಇದನ್ನೂ ಓದಿ: ಇಂದಿನಿಂದ ಭಾರಿ ಮಳೆ ಸಾಧ್ಯತೆ : ಶಿವಮೊಗ್ಗ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ