ಬೆಳ್ತಂಗಡಿ: ಧರ್ಮಸ್ಥಳದಲ್ಲಿ ನಡೆಯುತ್ತಿರುವ ಲಕ್ಷ ದೀಪೋತ್ಸವದಲ್ಲಿ ಭಾಗವಹಿಸುತ್ತಿರುವುದು ನನ್ನ ಯೋಗ. ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಂಜುನಾಥ ಸ್ವಾಮಿಯ ಅನುಗ್ರಹ ಪಡೆದು ನಾಡಿನ ಎಲ್ಲರಿಗೂ ಉತ್ತಮ ಆರೋಗ್ಯ ಹಾಗೂ ಕೊರೊನಾ 3 ನೇ ಅಲೆ ಒಮಿಕ್ರೋನ್ನಿಂದ ಮುಕ್ತಿ ನೀಡಲಿ ಎಂದು ಪ್ರಾರ್ಥಿಸಿಕೊಂಡಿದ್ದೇನೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದರು.
ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ ಪ್ರಯುಕ್ತ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಬಳಿಕ ಮಾಧ್ಯಮದವರ ಜೊತೆ ಸಚಿವರು ಮಾತನಾಡಿದರು.
ಕೊರೊನಾ 3ನೇ ಅಲೆ ಬಗ್ಗೆ ಅನೇಕ ಸಭೆಗಳನ್ನು ಬೆಂಗಳೂರಿನಲ್ಲಿ ಮುಗಿಸಿ ಮುಖ್ಯಮಂತ್ರಿಗಳ ಅನುಮತಿ ಪಡೆದು ಧರ್ಮಸ್ಥಳಕ್ಕೆ ಬಂದಿದ್ದೇನೆ. ಈಗಾಗಲೇ ಬೆಂಗಳೂರಲ್ಲಿ ಎಲ್ಲಾ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಹಿರಿಯ ಅಧಿಕಾರಿಗಳು, ವೈದ್ಯರ ಸಭೆ ಕರೆದು ಒಮಿಕ್ರೋನ್ ಸಿದ್ಧತೆಗಳ ಬಗ್ಗೆ ವಿಡಿಯೋ ಸಂವಾದ ನಡೆಸಲಾಗಿದೆ. ಯಾವ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು ಎಂಬುವುದರ ಬಗ್ಗೆ ಸಲಹೆ ಸೂಚನೆ ಕೊಡಲಾಗಿದೆ. ಜೊತೆಗೆ ಸೋಂಕು ಹರಡದಂತೆ ತಡೆಯಲು ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಿದ್ದೇವೆ ಎಂದರು.
ಸಾಹಿತ್ಯದಿಂದ ಸುಸ್ಥಿರ ಸಮಾಜ ನಿರ್ಮಾಣ:
ದೀಪ ಬೆಳಕಿನ ಸಂಕೇತ. ಲಕ್ಷದೀಪೋತ್ಸವ ಕೇವಲ ಉತ್ಸವ ಅಲ್ಲ. ಶಿಕ್ಷಣ, ಮಾಹಿತಿ ಮತ್ತು ಜಾಗೃತಿಯೊಂದಿಗೆ ಭಕ್ತಿ ಮತ್ತು ಶರಣಾಗತಿ ಮೂಲಕ ದೇವರಿಗೆ ಕೃತಜ್ಞತೆ ಸಲ್ಲಿಸುವ ಉತ್ಸವವಾಗಿದೆ ಎಂದು ಸಾಹಿತ್ಯ ಸಮ್ಮೇಳನದ 89ನೆ ಅಧಿವೇಶನ ಉದ್ಘಾಟಿಸಿ ಸಚಿವ ಡಾ.ಸುಧಾಕರ್ ಅಭಿಪ್ರಾಯಪಟ್ಟರು.
ದಕ್ಷಿಣ ಕನ್ನಡ ಜಿಲ್ಲೆಯ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಜಾನಪದ ಸೊಗಡನ್ನು ಶ್ಲಾಘಿಸಿದರು. ಸಾಹಿತ್ಯ ಕ್ಷೇತ್ರಕ್ಕೆ ಮಹಾಕವಿ ರತ್ನಾಕರವರ್ಣಿ, ಮಂಜೇಶ್ವರ ಗೋವಿಂದ ಪೈ, ಕೆ. ಶಿವರಾಮ ಕಾರಂತ ಮೊದಲಾದವರು ಅಮೂಲ್ಯ ಕೊಡುಗೆ ನೀಡಿದ್ದಾರೆ. ಯಕ್ಷಗಾನ, ಭೂತದ ಕೋಲ, ಕಂಬಳ ಮೊದಲಾದ ಜಾನಪದ ಕ್ರೀಡೆಗಳು ಹಾಗೂ ಕಲೆಗಳ ಸೊಗಡನ್ನು ಶ್ಲಾಘಿಸಿದರು. ಕರ್ನಾಟಕದ ಏಕೀಕರಣದಿಂದಾಗಿ ನವಕರ್ನಾಟಕ ಉದಯವಾಗಿದೆ ಎಂದರು.
ಸಾಹಿತಿಗಳು ಸಮಾಜವನ್ನು ತಿದ್ದುವ ದಾರ್ಶನಿಕರು. ತಾನು ಸಾಹಿತಿ ಅಲ್ಲವಾದರೂ ಸಾಹಿತ್ಯ ಮತ್ತು ಸಾಹಿತಿಗಳ ಬಗ್ಗೆ ಅಭಿಮಾನ ಮತ್ತು ಗೌರವ ಇದೆ. ಸಾಹಿತ್ಯದಿಂದ ಮಾತ್ರ ಸುಸ್ಥಿರ ಸಮಾಜ ನಿರ್ಮಾಣ ಸಾಧ್ಯ. ಇಂದು ಎಲ್ಲರಲ್ಲಿಯೂ ಪುಸ್ತಕ ಹವ್ಯಾಸ ಕಡಿಮೆಯಾಗಿದೆ ಎಂದು ವಿಷಾದಿಸಿದರು.
ಸರ್ವರಿಗೂ ಹಿತ ಉಂಟು ಮಾಡುವುದೇ ಸಾಹಿತ್ಯ:
ಸರ್ವರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರು, ಧರ್ಮ ಮತ್ತು ಸಾಹಿತ್ಯ ಸಮಸ್ತ ಮಾನವ ಸಮಾಜದ ಏಳಿಗೆಗೆ ಪೂರಕ ಮತ್ತು ಪ್ರೇರಕವಾಗಿದೆ. ವ್ಯಕ್ತಿ ಮತ್ತು ಸಮಾಜಕ್ಕೆ ಹಿತವನ್ನುಂಟುಮಾಡುವುದೇ ಸಾಹಿತ್ಯ ಎಂದು ಹೇಳಿದರು.