ಮಂಗಳೂರು: ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದ ತುಂಬು ಗರ್ಭಿಣಿಗೆ ಆಸ್ಪತ್ರೆಗೆ ತೆರಳಲು ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿ ಸಮಯ ಪ್ರಜ್ಞೆ ಮೆರೆದ ಕಾವೂರು ಪೊಲೀಸ್ ಠಾಣಾ ಹೆಡ್ ಕಾನ್‌ಸ್ಟೇಬಲ್ ಶಿವಪ್ಪ ಅವರಿಗೆ ಇಂದಿನ ಕೋವಿಡ್ ಯೋಧ ಗೌರವಕ್ಕೆ ಪಾತ್ರರಾಗಿದ್ದಾರೆ.
ನಿನ್ನೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ಬಾಗಲಕೋಟೆ ಮೂಲದ ಪ್ರಸ್ತುತ ಶಾಂತಿನಗರ ನಿವಾಸಿ ಸುಧಾ ಎಂಬುವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಇದರಿಂದ ಯಾವುದೇ ವಾಹನ ವ್ಯವಸ್ಥೆ ಇಲ್ಲದ ಕಾರಣ ಅವರ ಕಡೆಯವರು ಕಾವೂರು ಪೊಲೀಸ್ ಠಾಣೆಗೆ ಕರೆ ಮಾಡಿದ್ದರು. ಈ ಸಂದರ್ಭ ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್‌ಸ್ಟೇಬಲ್ ಶಿವಪ್ಪನವರು ಠಾಣೆಗೆ ಬಂದ ದೂರವಾಣಿ ಕರೆಯನ್ನು ಆಧರಿಸಿ ಸ್ಥಳಕ್ಕೆ ತೆರಳಿದಾಗ ಸುಧಾ ಅವರು ವಿಪರೀತ ಹೊಟ್ಟೆ ನೋವಿನಿಂದ ನರಳುತ್ತಿದ್ದರು. ತಕ್ಷಣ ಅವರು ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿ ಸರ್ಕಾರಿ ಲೇಡಿಗೋಶನ್ ಆಸ್ಪತ್ರೆಯಲ್ಲಿ ಗರ್ಭಿಣಿಯನ್ನು ದಾಖಲು ಮಾಡಿ ಸಮಯ ಪ್ರಜ್ಞೆ ಮತ್ತು ಕರ್ತವ್ಯ ನಿಷ್ಠೆ ಮೆರೆದಿದ್ದಾರೆ.
ಇವರ ಈ ಕಾರ್ಯವನ್ನು ಪರಿಗಣಿಸಿ ಇಂದಿನ ಕೋವಿಡ್ ಯೋಧ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಗಿದೆ.