ಮಂಗಳೂರು : ರಾಜ್ಯ ಸರ್ಕಾರವು ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಜೂನ್ ತಿಂಗಳಲ್ಲಿ ನಡೆಸಲು ಮುಂದಾಗಿದೆ. ಇದು ಅತ್ಯಂತ ಆತುರದ ನಿರ್ಧಾರವಷ್ಟೇ ಅಲ್ಲ, ಆತ್ಮಘಾತುಕ ಕ್ರಮವೂ ಆಗಿದೆ. ಇಷ್ಟೊಂದು ಅವಸರ ಬೇಕಾಗಿಲ್ಲ. ಎಲ್ಲವೂ ತಿಳಿಯಾದ ಬಳಿಕ ಅಗಸ್ಟ್ ತಿಂಗಳಲ್ಲಿ ನಡೆಸುವುದು ಸೂಕ್ತ ಎಂದು ಕಾಂಗ್ರೆಸ್ ವಕ್ತಾರ ಪಿ ವಿ ಮೋಹನ್ ಹೇಳಿದರು.
ಸಾಂಕ್ರಾಮಿಕ ತಜ್ಞರು, ವೈದ್ಯಕೀಯ ತಜ್ಞರ ಅಭಿಪ್ರಾಯದಂತೆ ಕೊರೊನಾ ಸೋಂಕನ್ನು ನಿರ್ಬಂಧಿಸಲು ಮೇ ಮತ್ತು ಜೂನ್ ತಿಂಗಳು ನಿರ್ಣಾಯಕ ಪಾತ್ರ ವಹಿಸಲಿದೆ. ಅಲ್ಲದೆ ಜೂನ್, ಜುಲೈನಲ್ಲಿ ಸೋಂಕು ಬಾಧಿತರ ಸಂಖ್ಯೆ ಗರಿಷ್ಠ ಮಟ್ಟಕ್ಕೆ ಏರಲಿದೆ ಎಂದು ಭಾರತದ ಉನ್ನತ ಮಟ್ಟದ ವೈದ್ಯಕೀಯ ಸಂಸ್ಥೆ ಏಮ್ಸ್ ಹೇಳಿದೆ. ಮಾರ್ಚ್‌ನಲ್ಲಿ ಮೊದಲ ಲಾಕ್‌ಡೌನ್‌ನಲ್ಲಿ 130 ಜಿಲ್ಲೆಗಳಲ್ಲಿ 657 ಪ್ರಕರಣ ಕಂಡು ಬಂದಿತ್ತು. ಅದೇ ಮೇ 3ರ ಹೊತ್ತಿಗೆ 42, 836 ಪ್ರಕರಣ ದಾಖಲಾಗಿವೆ. ಸದ್ಯ 401 ಜಿಲ್ಲೆಗಳಿಗೆ ಕೊರೊನಾ ಹಬ್ಬಿದೆ. ಮುಂದಕ್ಕೆ 3 ಲಕ್ಷ ಜನರಿಗೆ ಸೋಂಕು ಹರಡುವ ಬಗ್ಗೆ ಮಾಹಿತಿ ಇದೆ. ಈ ಹಿನ್ನೆಲೆ ಮೇ 17ರ ಬಳಿಕವೂ ಲಾಕ್‌ಡೌನ್ ಮುಂದುವರಿಯುವ ಸಾಧ್ಯತೆ ಇದೆ ಎಂದರು.
ವಿವಿಧ ದೇಶಗಳಲ್ಲಿರುವ ಹಾಗೂ ಬೇರೆ ಬೇರೆ ರಾಜ್ಯಗಳಲ್ಲಿರುವ 75,000 ಮಂದಿ ಕನ್ನಡಿಗರು ಮೇ ತಿಂಗಳ ಅಂತ್ಯದೊಳಗೆ ರಾಜ್ಯಕ್ಕೆ ಬರಲಿದ್ದಾರೆ. ಅವರಿಗೆ ಐಸೋಲೇಷನ್ ಹಾಗೂ ಕ್ವಾರೆಂಟೈನ್ ವ್ಯವಸ್ಥೆ ಮಾಡುವುದೇ ರಾಜ್ಯಕ್ಕೆ ದೊಡ್ಡ ಸವಾಲಾಗಿದೆ. ಆದ್ದರಿಂದ ಪರೀಕ್ಷೆಯನ್ನು ಮುಂದೂಡುವುದೇ ಅತ್ಯಂತ ವಿವೇಕಯುಕ್ತ ಕ್ರಮ. ಎಸ್ಎಸ್ಎಲ್ಸಿ ಪರೀಕ್ಷೆಗೆ 9 ಲಕ್ಷ ಮಕ್ಕಳು ಹಾಜರಾಗಲಿದ್ದಾರೆ. ಇತ್ತೀಚೆಗೆ ಸರ್ಕಾರವು ಫೇಸ್‌ಬುಕ್ ಮೂಲಕ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಉದ್ದೇಶಿಸಿ ಮಾತಾಡಿತು.
ಅಲ್ಲದೆ ದೂರದರ್ಶನದಲ್ಲಿ ಪುನರ್ ಮನನ ಕಾರ್ಯಕ್ರಮ ಮಾಡಲಾಗಿದೆ. ಆದರೆ, ಎಷ್ಟು ಮಂದಿ ಮಕ್ಕಳು ಹಾಗೂ ಪೋಷಕರಲ್ಲಿ ಫೇಸ್‌ಬುಕ್ ಇದೆ? ಎಷ್ಟು ಮಂದಿಯ ಮನೆಯಲ್ಲಿ ಟಿವಿ ಇದೆ? ಆದ್ದರಿಂದ ಎಲ್ಲಾ ಸಮುದಾಯ ಭವನಗಳಲ್ಲಿ ಟಿವಿಗಳನ್ನು ಸಜ್ಜುಗೊಳಿಸಿ, ಮಕ್ಕಳನ್ನು ಪರೀಕ್ಷೆಗೆ ಸಿದ್ದಗೊಳಿಸುವ ಕಾರ್ಯ ಆಗಬೇಕಾಗಿದೆ ಎಂದು ಪಿ ವಿ ಮೋಹನ್ ಹೇಳಿದರು. ಶಾಲಾ, ಕಾಲೇಜು ಶುಲ್ಕವನ್ನು ಹೆಚ್ಚಿಸಬಾರದೆಂದು ಎಲ್ಲಾ ಶಾಲೆಗಳಿಗೆ ಸಚಿವ ಸುರೇಶ್ ಕುಮಾರ್ ಸುತ್ತೋಲೆ ಕಳಿಸಿದ್ದಾರೆ. ಆದರೆ, ಯಾವ ಶಾಲೆ ಅಥವಾ ಕಾಲೇಜು ತಮ್ಮ ಮಾತನ್ನು ಗಂಭೀರವಾಗಿ ಪರಿಗಣಿಸಿದೆ. ನಿಮ್ಮ ಮಾತಿಗೆ ಬೆಲೆ ಕೊಡದೆ, ಈಗಾಗಲೇ ಆನ್‌ಲೈನ್ ಮುಖಾಂತರ ಸೀಟ್ ಭರ್ತಿ ಮಾಡಲಾಗಿದೆ.
ಅಲ್ಲದೆ ಶುಲ್ಕವನ್ನು ಏರಿಸಿ ಮೂರು ದಿನಗಳೊಳಗೆ ಕಟ್ಟಿ ಸೀಟುಗಳನ್ನು ಖಾತ್ರಿ ಮಾಡಬೇಕೆಂದು ಕಟ್ಟಪ್ಪಣೆ ಮಾಡಿದೆ. ಆದ್ದರಿಂದ ಸಚಿವರು ಇದನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು. ಇನ್ನೊಂದು ಬಹಳ ಆಘಾತದ ಸಂಗತಿಯೆಂದರೆ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಎಂಡಿ ಸೀಟಿನ ವಾರ್ಷಿಕ ಶುಲ್ಕ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಇದು ಖಾಸಗಿಯವರ ಕೆಲಸವಲ್ಲ. ಸರ್ಕಾರದ್ದೇ ಕ್ರಮ. ಕಳೆದ ಬಾರಿಯೇ ಜಾಸ್ತಿ ಶುಲ್ಕ ವಿಧಿಸಲಾಗಿತ್ತು. ಈ ವರ್ಷ ಶೇ. 23ರಷ್ಟು ಹೆಚ್ಚಳ ಮಾಡಲಾಗಿದೆ. ಕೌನ್ಸೆಲಿಂಗ್ ಮೂಲಕ ಖಾಸಗಿ ಸೀಟು ಪಡೆದವರಿಗೆ 32 ಶೇ. ಹೆಚ್ಚಳ ಮಾಡಲಾಗಿದೆ.
ಈ ಮೂಲಕ ಸರ್ಕಾರ ಖಾಸಗಿ ಕಾಲೇಜುಗಳೊಂದಿಗೆ ಶಾಮೀಲಾಗಿದೆ ಎಂದು ಆರೋಪಿಸಿದ ಅವರು, ಕೋವಿಡ್ ನಂತಹ ಮಾರಕ ರೋಗದ ಈ ಸಂದಿಗ್ಧ ಸಂದರ್ಭದಲ್ಲಿಯೂ ಈ ರೀತಿ ಮಾಡಿರೋದು ದೊಡ್ಡ ಅನ್ಯಾಯ. ಆದ್ದರಿಂದ ಸರ್ಕಾರ ಪರಿಶೀಲನೆ ಮಾಡಿ ಶುಲ್ಕ ಕಡಿಮೆ ಮಾಡಲಿ ಎಂದು ಪಿ ವಿ ಮೋಹನ್ ಒತ್ತಾಯಿಸಿದರು.