ಮಂಗಳೂರು: ಸುರತ್ಕಲ್ನ ಮಂಗಳಪೇಟೆಯ ಫಾಝಿಲ್ ಎಂಬಾತನ ಹತ್ಯೆ ಪ್ರಕರಣದಲ್ಲಿ ಆರೋಪಿಗಳಿಗೆ ಆಶ್ರಯ ನೀಡಿದ ಬಂಟ್ವಾಳದ ಹರ್ಷಿತ್‌ಗೆ ನ್ಯಾಯಾಲಯದಿಂದ ಜಾಮೀನು ದೊರೆತಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಸರಣಿ ಹತ್ಯೆ ಪ್ರಕರಣಗಳು ಆತಂಕ ಸೃಷ್ಟಿಸಿದ್ದವು. ಈ ಪೈಕಿ ಜುಲೈ 28 ರಂದು ನಡೆದ ಫಾಝಿಲ್ ಹತ್ಯೆ ಪ್ರಕರಣವೂ ಒಂದಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿತ್ತು. ವಿಚಾರಣೆಯ ಸಂದರ್ಭದಲ್ಲಿ ಇವರಿಗೆ ಆಶ್ರಯ ನೀಡಿದ ಬಂಟ್ವಾಳದ ಹರ್ಷಿತ್ನನ್ನೂ ಸಹ ಬಂಧಿಸಲಾಗಿತ್ತು.
ಹರ್ಷಿತ್ ಆರೋಪಿಗಳನ್ನು ಮನೆಗೆ ಕರೆದುಕೊಂಡು ಹೋಗಿ ಉಳಿದುಕೊಳ್ಳಲು ಆಶ್ರಯ ನೀಡಿದ್ದನು. ಪೊಲೀಸರು ಆತನನ್ನು ಆಗಸ್ಟ್ 17 ರಂದು ಬಂಧಿಸಿದ್ದರು. ಹರ್ಷಿತ್ ಜಾಮೀನಿಗಾಗಿ ಕೋರ್ಟ್ಗೆ ಮೊರೆ ಹೋಗಿದ್ದು ಪ್ರಕರಣದ ವಿಚಾರಣೆ ನಡೆಸಿದ 3ನೇ ಜಿಲ್ಲಾ ಸತ್ರ ನ್ಯಾಯಾಲಯವು ಸೆ.7ರಂದು ಜಾಮೀನು ಮಂಜೂರು ಮಾಡಿದೆ. ಸೆ.13ರಂದು ಜೈಲಿನಿಂದ ಆತ ಬಿಡುಗಡೆಗೊಂಡಿದ್ದಾನೆ.
ಜುಲೈ 28ರಂದು ರಾತ್ರಿ ಮುಹಮ್ಮದ್ ಫಾಝಿಲ್ ಸುರತ್ಕಲ್ನ ಮೂಡ ಮಾರುಕಟ್ಟೆಯಲ್ಲಿರುವ ಬಟ್ಟೆ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಸ್ನೇಹಿತನನ್ನು ಭೇಟಿ ಮಾಡಿದ್ದ. ಬಳಿಕ ಅಂಗಡಿಯಿಂದ ಹೊರಬರುತ್ತಿದ್ದಂತೆ ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೈಗೈದಿತ್ತು.
ಇದನ್ನೂ ಓದಿ: ಸುರತ್ಕಲ್ ಫಾಜಿಲ್ ಕೊಲೆ ಪ್ರಕರಣ: ಏಳು ಮಂದಿ ಬಂಧನ