ಪುತ್ತೂರು (ದಕ್ಷಿಣ ಕನ್ನಡ): ಪುತ್ತೂರಿನಲ್ಲಿ ಜನವರಿ 28ರ ಕಂಬಳದಲ್ಲಿ ನಡೆದಿದೆ ಎನ್ನಲಾದ ಅಸಭ್ಯ ವರ್ತನೆ ಪ್ರಕರಣಕ್ಕೆ ಸಂಬಂಧಿಸಿದ ಕಂಬಳ ಸಮಿತಿಯವರು ಶ್ರೀ ಮಹಾಲಿಂಗೇಶ್ವರ ದೇವರ ಮೊರೆ ಹೋಗಿದ್ದಾರೆ. ದೇವರ ನಡೆಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಏಕಾದಶ ರುದ್ರ ಸೇವೆ ಸಂಕಲ್ಪ ಮಾಡಿದ್ದಾರೆ. ಬುಧವಾರ ಮಧ್ಯಾಹ್ನ ಮಹಾಪೂಜೆಗೆ ಮುನ್ನ ಕಂಬಳ ಸಮಿತಿ ಗೌರವಾಧ್ಯಕ್ಷ ಹಾಗೂ ಮಾಜಿ ಶಾಸಕಿ ಶಕುಂತಲಾ ಟಿ. ಶೆಟ್ಟಿ ನೇತೃತ್ವದ ತಂಡ ನಡೆಯಲ್ಲಿ ನಿಂತು ಪ್ರಾರ್ಥನೆ ಸಲ್ಲಿಸಿತು.
"ಕಂಬಳ ಗದ್ದೆಯಲ್ಲಿ ನಟಿಯೊಬ್ಬಳ ಜೊತೆ ಯಾರೋ ಓರ್ವ ವ್ಯಕ್ತಿ ಅಸಭ್ಯ ವರ್ತನೆ ಮಾಡಿದ್ದಾನೆ ಎನ್ನಲಾದ ಆರೋಪಕ್ಕೆ ಸಂಬಂಧಿಸಿ ಫೋಟೋ, ವಿಡಿಯೋ ವೈರಲ್ ಮಾಡಲಾಗುತ್ತಿದೆ. ಕಂಬಳ ಸಮಿತಿಯನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸುವ ಯತ್ನ ಮಾಡಲಾಗುತ್ತಿದೆ. ನಮಗೆ ಮಹಾಲಿಂಗೇಶ್ವರ ಸಾನಿಧ್ಯವೇ ನ್ಯಾಯಾಲಯ. ದೇವರು ನಮಗೆ ನ್ಯಾಯ ನೀಡಬೇಕು" ಎಂದು ಪ್ರಾರ್ಥಿಸಿದರು.
ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಪ್ರಾರ್ಥನೆ ಸಲ್ಲಿಸಿ, "ಅಹಿತಕರ ಘಟನೆ ನಡೆದಿದೆ ಎನ್ನುತ್ತಾ ಅಪಪ್ರಚಾರ ಮಾಡಲಾಗುತ್ತಿದೆ. ಇದರ ಹಿಂದೆ ಯಾರ ಕುಮ್ಮಕ್ಕು ಇದೆ, ಯಾರು ಇದರ ಹಿಂದಿದ್ದಾರೆ ಎಂಬುದಕ್ಕೆ ದೇವರೇ ನಮಗೆ ನ್ಯಾಯ ಕೊಡಬೇಕು" ಎಂದರು. ಅರ್ಚಕ ವಸಂತ ಕೆದಿಲಾಯ ಪ್ರಾರ್ಥನೆ ಸಲ್ಲಿಸಿ, "ಅನೇಕ ವರ್ಷಗಳಿಂದ ಕಂಬಳ ಒಳ್ಳೆಯ ರೀತಿಯಲ್ಲಿ ನಡೆಯುತ್ತಾ ಬಂದಿದೆ. ಗೊತ್ತಿದ್ದೋ ಗೊತ್ತಿಲ್ಲದೆಯೋ ಅಹಿತಕರ ಘಟನೆ ನಡೆದಿದ್ದರೆ ಅದಕ್ಕೆ ಮಹಾಲಿಂಗೇಶ್ವರ ದೇವರು ನ್ಯಾಯ ನೀಡಲಿ, ಬುದ್ಧಿ ನೀಡಲಿ. ಭವಿಷ್ಯದಲ್ಲಿ ಪುತ್ತೂರು ಕಂಬಳ ಯಾವುದೇ ವಿಘ್ನಗಳಿಲ್ಲದೆ ಸುಸೂತ್ರವಾಗಿ ನಡೆಯಲಿ" ಎಂದು ಬೇಡಿಕೊಂಡರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, "ಅನ್ಯಾಯ ಆಗಿದೆ ಎಂದು ಮಹಿಳೆ ನನಗೆ ಹೇಳಬೇಕಲ್ಲವೇ? ಇಲ್ಲದಿದ್ದರೆ ನಾನೇನು ಮಾಡಲಿ? ನಾನು ರಾತ್ರಿ 11 ಗಂಟೆಗೆ ಕಂಬಳ ಗದ್ದೆಯಿಂದ ನಿರ್ಗಮಿಸಿದ್ದೇನೆ. ನಸುಕಿನ ಜಾವ ನಟಿಯರು ಕಂಬಳ ಗದ್ದೆಗೆ ಮತ್ತೊಮ್ಮೆ ಬಂದಿದ್ದರಂತೆ, ಆಗ ಯಾರೋ ಅವರ ಜೊತೆ ಅಸಭ್ಯ ವರ್ತನೆ ತೋರಿದ್ದರು ಎಂದೆಲ್ಲಾ ಹೇಳುತ್ತಿದ್ದಾರೆ. ಮರುದಿನ ಕುತ್ತಾರು ಕೊರಗಜ್ಜ ಸಾನಿಧ್ಯದಲ್ಲಿ ಅದೇ ನಟಿಯರೆಲ್ಲ ನನಗೆ ಸಿಕ್ಕಿದ್ದು, ಎಲ್ಲರೂ ಪುತ್ತೂರು ಕಂಬಳದ ವ್ಯವಸ್ಥೆ ಬಗ್ಗೆ ಹಾಡಿ ಹೊಗಳಿದ್ದಾರೆ. ಆದರೆ ಘಟನೆ ಬಗ್ಗೆ ಹೇಳಿಲ್ಲ. ಅವರು ದೂರು ನೀಡಿದರೆ ಸೂಕ್ತ ನ್ಯಾಯ ಪೊಲೀಸ್ ಇಲಾಖೆಯಿಂದ ಕೊಡುಸುವಂತೆ ಮಾಡುತ್ತೇನೆ. ಆದರೆ ಅವರು ಈ ಬಗ್ಗೆ ಯಾವುದೇ ದೂರು ದಾಖಲಿಸಿಲ್ಲ" ಎಂದರು.
ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಮಾತನಾಡಿ, "ದೇವಳದ ಗದ್ದೆಗೆ ನಾವು ಪೊಲೀಸರನ್ನು ಬರಲು ಹೇಳಲಾಗುವುದಿಲ್ಲ. ನಮ್ಮ ಅತಿಥಿಗಳಾಗಿ ಬಂದಿದ್ದ ನಟ, ನಟಿಯರನ್ನು ಅತ್ಯುತ್ತಮವಾಗಿ ನೋಡಿಕೊಂಡು ಕಳಿಸಿಕೊಟ್ಟಿದ್ದೇವೆ. ಮುಂಜಾನೆ ಹೊತ್ತಿಗೆ ಅವರು ಮತ್ತೊಮ್ಮೆ ಕಂಬಳ ಗದ್ದೆಗೆ ಬಂದಿದ್ದರೆ, ಆಗೇನಾದರೂ ಅಹಿತಕರ ಘಟನೆ ನಡೆದಿದ್ದರೆ ಪೊಲೀಸರಿಗೆ ದೂರು ನೀಡಲು ಅವಕಾಶವಿತ್ತು. ಯಶಸ್ವಿಯಾಗಿ ನಡೆಯುತ್ತಿರುವ ಪುತ್ತೂರು ಕಂಬಳದ ಹೆಸರು ಹಾಳು ಮಾಡಲು, ನಮ್ಮ ತೇಜೋವಧೆ ಮಾಡಲು ಅಪಪ್ರಚಾರ ಮಾಡಲಾಗುತ್ತಿದೆ. ಮಹಾಲಿಂಗೇಶ್ವರನ ಮಣ್ಣಿನಲ್ಲಿ ನಡೆದ ಘಟನೆ. ದೇವರೇ ನೋಡಿಕೊಳ್ಳಲಿ ಎಂದು ನಾವು ಪ್ರಾರ್ಥಿಸಿದ್ದೇವೆ" ಎಂದು ಹೇಳಿದರು.
ಇದನ್ನೂ ಓದಿ: ಇತಿಹಾಸ ಪ್ರಸಿದ್ಧ ಪುತ್ತೂರು ಕಂಬಳದಲ್ಲಿ ನಟಿ ಸಾನ್ಯಾ ಅಯ್ಯರ್ಗೆ ಕಿರುಕುಳ: ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಸ್ಪಷ್ಟನೆ