ಮಂಗಳೂರು: ಪಿಎಚ್ಡಿ ವಿದ್ಯಾರ್ಥಿನಿಯೋರ್ವಳಿಗೆ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿ ಪ್ರಾಧ್ಯಾಪಕನ ವಿರುದ್ಧ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಂಧ್ರಪ್ರದೇಶದ ಆಚಾರ್ಯ ನಾಗಾರ್ಜುನ ವಿವಿಯ ಪ್ರಾಧ್ಯಾಪಕ ಡಾ.ಕೊಂಡೂರು ಸುಧೀರ್ ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದೆ. ಕಿರುಕೊಳಕ್ಕೊಳಗಾಗಿರುವ ವಿದ್ಯಾರ್ಥಿನಿ ಪಾಂಡೇಶ್ವರದಲ್ಲಿರುವ ಶ್ರೀನಿವಾಸ ವಿವಿಯಲ್ಲಿ ಪ್ರಾಧ್ಯಾಪಕಿ ಶೈಲಶ್ರೀ ಎಂಬವರ ಮಾರ್ಗದರ್ಶನದಲ್ಲಿ ಪಿಎಚ್ಡಿ ಮಾಡುತ್ತಿದ್ದಾರೆ. ಆದರೆ 2018 ರಿಂದ ಪರಿಚಯವಾಗಿರುವ ಆರೋಪಿ ಡಾ.ಕೊಂಡೂರು ಸುಧೀರ್ ಕುಮಾರ್ ತನ್ನನ್ನು ಪಿಎಚ್ ಡಿಗೆ ಸಹ ಮಾರ್ಗದರ್ಶಕನನ್ನಾಗಿ ನೇಮಕ ಮಾಡುವಂತೆ ವಿದ್ಯಾರ್ಥಿನಿಯಲ್ಲಿ ಹೇಳಿಕೊಂಡಿದ್ದ. ಒಪ್ಪಿದ ವಿದ್ಯಾರ್ಥಿನಿ ವಿವಿಗೆ ಅನುಮತಿ ಕೋರಿದಾಗ ಆತನಿಗೆ ಅರ್ಹತೆ ಇಲ್ಲ ಎಂದು ಕೋರಿಕೆ ತಿರಸ್ಕರಿಸಲಾಗಿತ್ತು.
ಆ ಬಳಿಕ ಆರೋಪಿ ಡಾ.ಕೊಂಡೂರು ಸುಧೀರ್ ಕುಮಾರ್ ವಿದ್ಯಾರ್ಥಿನಿ ಹಾಗೂ ಆಕೆಯ ಮನೆಯವರಿಗೆ ಕಿರುಕುಳ ನೀಡಲು ಆರಂಭಿಸಿದ್ದಾನೆ ಎಂದು ವಿದ್ಯಾರ್ಥಿನಿ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. ಅಲ್ಲದೆ ವಿದ್ಯಾರ್ಥಿನಿ ಭಾವಚಿತ್ರವನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದಾನೆ ಎಂದು ಆರೋಪಿಸಿ ವಿದ್ಯಾರ್ಥಿನಿ ಪೋಷಕರು ಮಂಗಳೂರು ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.