ಮಂಗಳೂರು: ಬೀದಿಬದಿ ವ್ಯಾಪಾರಿಗಳಿಗೆ ಸರ್ಕಾರಿ ಸವಲತ್ತುಗಳ ಅರಿವು ಹಾಗೂ ಉಚಿತ ವೈದ್ಯಕೀಯ ತಪಾಸಣಾ ಕಾರ್ಯಕ್ರಮ ಇಂದು ನಗರದ ಪುರಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಬೀದಿಬದಿ ವ್ಯಾಪಾರಸ್ಥರಿಗೆ ರಾಜ್ಯದಲ್ಲೇ ಪ್ರಥಮ ಬಾರಿಗೆ 'ಕ್ಯೂಆರ್' ಸಂಕೇತದ ಪರವಾನಿಗೆ ಪತ್ರ ಹಾಗೂ ಐಡಿ ಕಾರ್ಡ್ ವಿತರಣೆ ಮಾಡಲಾಯಿತು. ಜೊತೆಗೆ ಕೆಎಂಸಿಯ ನುರಿತ ವೈದ್ಯರಿಂದ ವ್ಯಾಪಾರಿಗಳಿಗೆ ವಿವಿಧ ವೈದ್ಯಕೀಯ ತಪಾಸಣೆ ನಡೆಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಗಳೂರು ಮನಾಪ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಮಾತನಾಡಿ, ಬೀದಿಬದಿ ವ್ಯಾಪಾರಿಗಳ ಮೇಲಿನ ಬಹುದೊಡ್ಡ ಆರೋಪ ಎಂದರೆ ಬೀದಿಗಳಲ್ಲಿ ವ್ಯಾಪಾರ ಮಾಡುವುದರಿಂದ ರಸ್ತೆ ಸಂಚಾರ, ಪಾದಚಾರಿಗಳ ಸಂಚಾರಕ್ಕೆ ತೊಂದರೆಯಾಗುತ್ತದೆ. ತ್ಯಾಜ್ಯ ವಿಲೇವಾರಿ ಮಾಡಲ್ಲ, ನೈರ್ಮಲ್ಯ ಕಾಪಾಡುವುದಿಲ್ಲ ಎಂಬ ಹಲವಾರು ದೂರುಗಳಿವೆ. ಇಂತಹ ಯಾವುದೇ ರೀತಿಯ ದೂರುಗಳು ಬಾರದ ಹಾಗೆ ವ್ಯಾಪಾರ ನಡೆಸಿಕೊಂಡು ಹೋಗುವಂತೆ ಕರೆ ನೀಡಿದರು.