ಮಂಗಳೂರು/ಹುಬ್ಬಳ್ಳಿ: ಸರಕುಗಳನ್ನು ಒಂದೆಡೆಯಿಂದ ಮತ್ತೊಂದೆಡೆಗೆ ತಲುಪಿಸುವ ಕಾರ್ಯವನ್ನು ಗೂಡ್ಸ್ ಟ್ರಾನ್ಸ್ಪೋರ್ಟ್ ಉದ್ಯಮ ಮಾಡುತ್ತಿದೆ. ಆದ್ರೀಗ ಕೊರೊನಾ - ಲಾಕ್ಡೌನ್ ಎಫೆಕ್ಟ್, ಇಂಧನ ಬೆಲೆ ಏರಿಕೆ ಸಮಸ್ಯೆ ಸೇರಿದಂತೆ ಲಾರಿ ಚಾಲಕರ ಕೊರತೆಯಿಂದಾಗಿ ಗೂಡ್ಸ್ ಟ್ರಾನ್ಸ್ಪೋರ್ಟ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಲಾರಿ ಮಾಲೀಕರು ಜೀವನ ನಿರ್ವಹಣೆಗೆ ಪರದಾಡುವ ಪರಿಸ್ಥಿತಿ ಬಂದೊದಗಿದೆ.
ತಿಂಗಳಿಗೆ ಕನಿಷ್ಟ ಅಂದರೂ 3 ಟ್ರಿಪ್ ಆದರೆ ಮಾತ್ರ ಲಾರಿ ಮಾಲೀಕರಿಗೆ ಲಾಭದಾಯಕವಾಗಬಲ್ಲದು. ಆದ್ರೆ ಲಾರಿಗಳು ಹೆಚ್ಚಾಗಿದ್ದು, ಸರಕು ಸಾಗಿಸುವವರು ಕಡಿಮೆಯಾದ್ರಿಂದ ತಿಂಗಳಿಗೆ 2 ಟ್ರಿಪ್ ಆಗೋದೇ ಕಷ್ಟ ಅಂತಾರೆ ಮಂಗಳೂರು ಲಾರಿ ಮಾಲೀಕರು.
ಇನ್ನು, ಲಾರಿ ಮಾಲೀಕರಿಗೆ ಸರಿಯಾಗಿ ಲಾರಿ ಚಾಲಕರು ಸಿಗದಿರುವುದೇ ಇದೀಗ ದೊಡ್ಡ ಸಮಸ್ಯೆಯಾಗಿದೆ. ಇದ್ರ ಮೇಲೆ ಇಂಧನ ದರದ ಹೊಡೆತ ಬೇರೆ. ಗೂಡ್ಸ್ ಟ್ರಾನ್ಸ್ಪೋರ್ಟ್ ಉದ್ಯಮ ಸಂಕಷ್ಟದ ಸುಳಿಯಲ್ಲಿ ಸಿಲುಕಿದೆ.
ಹುಬ್ಬಳ್ಳಿ ಗೂಡ್ಸ್ ಟ್ರಾನ್ಸ್ಪೋರ್ಟ್ ಕಥೆಯೂ ಇದ್ರಿಂದ ಹೊರತಲ್ಲ. ಸಾರಿಗೆ ವೆಚ್ಚ ಹೆಚ್ಚಿಸಿದ್ರೆ ಸರಕು ಸಾಗಿಸುವವರ ಸಂಖ್ಯೆ ಇನ್ನೂ ಇಳಿಮುಖವಾಗೋದ್ರಲ್ಲಿ ಸಂದೇಹವೇ ಇಲ್ಲ. ಹಾಗಾಗಿ ಇಂಧನ ದರ ಇಳಿಸಿ ನಮಗೆ ಸಹಕರಿಸಬೇಕು ಅಂತಾರೆ ಉತ್ತರ ಕನ್ನಡ ಲಾರಿ ಚಾಲಕರ ಸಂಘದ ಅಧ್ಯಕ್ಷರು.
ಸರಕು ಸಾಗಣೆಯ ಲಾರಿಗಳನ್ನು ಓಡಿಸಲು ನುರಿತ ಚಾಲಕರ ಬೇಡಿಕೆಯಿದ್ದು, ಲಾರಿ ಡ್ರೈವರ್ಗಳ ಕೊರತೆಯು ಲಾರಿ ಮಾಲೀಕರನ್ನು ಹೈರಾಣಾಗಿಸಿದೆ. ಸರಿಯಾದ ಭದ್ರತೆ ಇಲ್ಲದಿರೋದ್ರಿಂದ ಬೇರೆ ಕೆಲಸದತ್ತ ಮೊರೆ ಹೋಗುವ ಪರಿಸ್ಥಿತಿ ಬಂದಿದೆಯೆಂದು ಲಾರಿ ಚಾಲಕರು ಅಸಮಾಧಾನ ಹೊರಹಾಕಿದ್ದಾರೆ.
ಒಟ್ಟಿನಲ್ಲಿ ಈ ಉದ್ಯಮ ಸಾಕಷ್ಟು ನಷ್ಟದಲ್ಲಿ ಸಾಗುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರ ನಮ್ಮ ನೆರವಿಗೆ ಬರಬೇಕಾಗಿದೆ ಎಂದು ಲಾರಿ ಮಾಲೀಕರು ಮತ್ತು ಚಾಲಕರು ಒತ್ತಾಯಿಸಿದ್ದಾರೆ.