ಬಂಟ್ವಾಳ (ದಕ್ಷಿಣ ಕನ್ನಡ) : ಪಶ್ಚಿಮ ವಲಯ ಐಜಿಪಿ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲೀಗ ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್ಒಪಿ) ಜಾರಿಗೆ ತರಲಾಗಿದೆ. ಹೀಗಾಗಿ, ಆರೋಪಿಗಳ ಬಂಧನಕ್ಕೆ ಪ್ರತ್ಯೇಕ ತಂಡ ರಚಿಸಲಾಗಿದೆ. ಪ್ರತಿ ಪೊಲೀಸ್ ಠಾಣೆಯಲ್ಲಿ ಗ್ಲಾಸ್ ಕ್ಯಾಬಿನ್ ಅಳವಡಿಸಬೇಕು. ಠಾಣೆಯಲ್ಲಿ ಐವರು ಸಿಬ್ಬಂದಿಯಷ್ಟೇ ಕರ್ತವ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ.
ಸ್ಯಾನಿಟೈಸರ್ ಸ್ಪ್ರೇ ಮಾಡಲು ಹ್ಯಾಂಡ್ ಆಪರೇಟರ್ ಪಂಪ್ ಬಳಸಬೇಕು. ಆರೋಪಿಗಳ ಬಂಧನಕ್ಕೆ ರಚಿಸಿದ ತಂಡ ಮತ್ತು ಆರೋಪಿಗಳು ಪಿಪಿಇ ಕಿಟ್ ಮತ್ತು ಎನ್-95 ಮಾಸ್ಕ್ ಧರಿಸಬೇಕು. ಗ್ಲೌಸ್ ಹಾಕಿರಬೇಕು ಎಂದು ಸೂಚಿಸಲಾಗಿದೆ. ಫೇಸ್ಮಾಸ್ಕ್ ಬಳಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಸಾರ್ವಜನಿಕರೊಂದಿಗೆ ವ್ಯವಹರಿಸಬೇಕು.
ನಿಯಮ ಪ್ರಕಾರ ಶೇ.30ರಷ್ಟು ಸಿಬ್ಬಂದಿ (ಸೆಂಟ್ರಿ, ಎಸ್ಹೆಚ್ಒ, ರೈಟರ್, ಕಂಪ್ಯೂಟರ್ ಸಿಬ್ಬಂದಿ, ತನಿಖೆಗೆ ಸಹಾಯಕರೊಬ್ಬರು) ಮಾತ್ರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಬೇಕು. ಔಟ್ ಡೋರ್ ಕರ್ತವ್ಯ ನಿರ್ವಹಿಸುವವರು ಠಾಣೆಗೆ ಬರುವಂತಿಲ್ಲ. ಹೀಗೆ ಮಾರ್ಗದರ್ಶಿ ಸೂತ್ರಗಳನ್ನು ನೀಡಲಾಗಿದೆ.
ಈ ಎಲ್ಲ ಸೂಚನೆಗಳನ್ನು ಮೇಲಧಿಕಾರಿಗಳ ಆದೇಶದ ಮೇಲೆ ಪಾಲಿಸುತ್ತಿದ್ದೇವೆ ಎಂದು ಬಂಟ್ವಾಳ ನಗರ ಪೊಲೀಸ್ ಠಾಣೆ ಎಸ್ಐ ಅವಿನಾಶ್ ಗೌಡ ಹೇಳಿದರು. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಎಸ್ಒಪಿ ಜಾರಿ ಮಾಡಲಾಗಿದೆ.