ಮಂಗಳೂರು: ಕರಾವಳಿ ವಿಶಿಷ್ಟ ಆಚರಣೆಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಆಚಾರ ವಿಚಾರಗಳು ವಿವಿಧತೆಯಿಂದ ಕೂಡಿದೆ. ಕರಾವಳಿಯಲ್ಲಿ ಗಮನ ಸೆಳೆಯುವ ವಿಶೇಷ ಆಚರಣೆಗಳಲ್ಲಿ ಪ್ರೇತಗಳ ಮದುವೆಯೂ ಒಂದು. ತುಳುನಾಡಿನ ಜನರಿಗೆ ಪ್ರೇತದ ಬಗ್ಗೆ ವಿಶೇಷ ನಂಬಿಕೆ.
ಸತ್ತವರು ತಮ್ಮ ಜೊತೆಗೆ ಇರುತ್ತಾರೆ ಎಂಬುದು ಇಲ್ಲಿನ ಜನರ ನಂಬಿಕೆ. ಮೃತರ ಅಪರಾಕ್ರಿಯೆಗಳನ್ನು ಮಾಡಿ ಮೋಕ್ಷ ಕರುಣಿಸುತ್ತಾರೆ. ಮದುವೆಯಾಗದೆ ಮೃತಪಟ್ಟವರಿಗೆ ವಿವಾಹ ನೆರೆವೇರಿಸುವುದು ಇಲ್ಲಿನ ಸಂಪ್ರದಾಯ.
ಯಾರಾದರೂ ಮದುವೆ ಮುಂಚೆಯೇ ಮೃತಪಟ್ಟರೆ ಅವರಿಗೆ ಮದುವೆ ವಯಸ್ಸಿನಲ್ಲಿ ಮದುವೆ ಮಾಡುವುದು ಇಲ್ಲಿನ ಸಂಪ್ರದಾಯ. ಈ ಮದುವೆಯನ್ನು ತುಳುವರು ಆಚರಿಸುವ ಆಟಿ ತಿಂಗಳಲ್ಲಿ ನಡೆಸುವುದು ಕ್ರಮ. ಅದರಲ್ಲೂ ಆಟಿ ಅಮಾವಾಸ್ಯೆಯ ರಾತ್ರಿ ಈ ಮದುವೆಗಳು ಹೆಚ್ಚಾಗಿ ನಡೆಯುತ್ತವೆ.
ಆಟಿ ತಿಂಗಳಲ್ಲಿ ತುಳುವರು ಯಾವುದೇ ಶುಭಸಮಾರಂಭಗಳನ್ನು ನಡೆಸುವುದಿಲ್ಲ. ಈ ಸಂದರ್ಭದಲ್ಲಿ ಮದುವೆಯಂತೂ ಆಗುವುದೇ ಇಲ್ಲ. ಈ ತಿಂಗಳಲ್ಲಿ ಪ್ರೇತಗಳ ಬಗ್ಗೆ ವಿಶೇಷ ನಂಬಿಕೆ ಇರುತ್ತದೆ. ಅದರಂತೆ ಪ್ರೇತಗಳ ಮದುವೆಯನ್ನು ಆಟಿ ತಿಂಗಳಲ್ಲಿ ಮಾಡುವುದು ವಾಡಿಕೆ.
ಈ ಪ್ರೇತಗಳ ಮದುವೆಯಲ್ಲಿ ವಧು-ವರ ಜೀವಂತ ಇಲ್ಲ ಎಂಬುದನ್ನು ಬಿಟ್ಟರೆ ಉಳಿದೆಲ್ಲವೂ ಇತರ ಮದುವೆಯ ರೀತಿಯಲ್ಲಿಯೇ ನಡೆಯುತ್ತದೆ. ಮದುವೆಗೆ ಮುನ್ನ ಸಾವನ್ನಪ್ಪಿರುವ ವಧು-ವರರನ್ನು ನಿಶ್ಚಯಿಸಿ ಮದುವೆಗಿಂತ ಒಂದೆರೆಡು ತಿಂಗಳ ಮೊದಲೇ ನಿಶ್ಚಿತಾರ್ಥ ಮಾಡಿ, ಆಟಿ ತಿಂಗಳಲ್ಲಿ ಮದುವೆಯನ್ನು ಮಾಡಲಾಗುತ್ತದೆ. ಈ ಮೂಲಕ ಪ್ರೇತಗಳಿಗೆ ವಿವಾರ ನೆರವೇರಿಸಲಾಗುತ್ತದೆ.
ಈ ಮದುವೆಯಲ್ಲಿ ತುಳುವ ಸಂಪ್ರದಾಯದಂತೆ ಮದುವೆಯ ಹಲವು ಶಾಸ್ತ್ರಗಳನ್ನು ಮಾಡಲಾಗುತ್ತದೆ. ಮದುವೆಯು ವರನ ಮನೆಯಲ್ಲಿ ನಡೆಯುವುದು ಕ್ರಮ. ಎರಡು ಆಸನದಲ್ಲಿ ವಧು ಮತ್ತು ವರರನ್ನು ಬೆಳ್ಳಿ ಅಥವಾ ಅಕ್ಕಿಯ ಪಾಪೆಯ ಮೂಲಕ ಇರಿಸಿ, ವಧುವಿನ ಆಸನದಲ್ಲಿ ಕರಿಮಣಿ ಇರಿಸಲಾಗುತ್ತದೆ. ಬಳಿಕ ಕೋಳಿ ಸಾರು, ಕೋಳಿ ಸುಕ್ಕ, ಮೀನು, ಅನ್ನ, ಸಾರು ಬಡಿಸಲಾಗುತ್ತದೆ. ಆ ಬಳಿಕ ಮದುವೆಗೆ ಬಂದ ಕುಟುಂಬದ ಸದಸ್ಯರಿಗೆ ಊಟ ನೀಡಲಾಗುತ್ತದೆ.
ಮದುವೆಯ ಬಳಿಕ ಆಷಾಢ ತಿಂಗಳಲ್ಲಿಯೇ ವಧುವಿನ ಮನೆಗೆ ವರನ ಮನೆಯವರು ಹೋಗಿ ವಧುವನ್ನು ಕರೆದುಕೊಂಡು ಹೋಗುವ ಕ್ರಮವು ನಡೆಯುತ್ತದೆ. ಈ ರೀತಿ ಪ್ರೇತ ಮದುವೆ ನಡೆಯುವುದು ವಿಶೇಷ. ಈ ರೀತಿಯ ಮದುವೆಗಳು ಆಟಿ ತಿಂಗಳಲ್ಲಿ ಹಲವೆಡೆ ಜರುಗುತ್ತವೆ. ಇದು ತುಳುನಾಡಿನ ವಿಶೇಷ ಆಚರಣೆಗಳಲ್ಲಿ ಒಂದಾಗಿದೆ.
ಓದಿ : ಅವ್ಯವಸ್ಥೆಗಳ ಆಗರವಾಗುತ್ತಿದೆ ಮಲ್ಟಿ ಲೆವೆಲ್ ಪಾರ್ಕಿಂಗ್ ಕಟ್ಟಡ: ಟೆಂಡರ್ ಪಡೆಯಲು ಕಂಪನಿಗಳ ಹಿಂದೇಟು