ಮಂಗಳೂರು: ಮಂಗಳೂರಿನಿಂದ ಹೊರಟಿದ್ದ ಸರಕು ಸಾಗಣೆ ರೈಲಿನ ಗ್ಯಾಸ್ ಟ್ಯಾಂಕ್ನಿಂದ ಗ್ಯಾಸ್ ಸೋರಿಕೆಯಾದ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ರೈಲನ್ನು ಮರಳಿ ತರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜೋಕಟ್ಟೆ ಬಳಿ ರೈಲ್ವೆ ಹಳಿ ಸುತ್ತಮುತ್ತ ಜನಸಂಚಾರ ನಿರ್ಬಂಧ ವಿಧಿಸಲಾಗಿದೆ. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ (ಹೆಚ್ಪಿಸಿಎಲ್) ನಿಂದ ಟ್ಯಾಂಕರ್ಗಳಲ್ಲಿ ಗ್ಯಾಸ್ ತುಂಬಿಸಿ ಕಳುಹಿಸಲಾಗಿತ್ತು. ಆದರೆ, ರೈಲು ಏಳು ಕಿಲೋಮೀಟರ್ ತಲುಪಿದ ಬಳಿಕ ಗ್ಯಾಸ್ ಸೋರಿಕೆಯ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ರೈಲು ವಾಪಾಸ್ ಹೆಚ್ಪಿಸಿಎಲ್ಗೆ ಆಗಮಿಸಿದೆ.
ಮಂಗಳೂರಿನಿಂದ ಸರಕು ಸಾಗಾಣೆ ರೈಲಿನಲ್ಲಿ ಗ್ಯಾಸ್ ತುಂಬಿದ ಟ್ಯಾಂಕರ್ಗಳನ್ನು ಸಾಗಿಸಲಾಗುತ್ತಿತ್ತು. ಆದರೆ, ಟ್ಯಾಂಕರ್ವೊಂದರಲ್ಲಿ ದಾರಿ ಮಧ್ಯೆ ಗ್ಯಾಸ್ ಸೋರಿಕೆಯಾಗುತ್ತಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ತಕ್ಷಣ ಹೆಚ್ಪಿಸಿಎಲ್ ರೈಲು ಹಿಂದಿರುಗಿದ್ದು, ಪರಿಶೀಲನೆ ನಡೆಸಲಾಗುತ್ತಿದೆ.
ರೈಲ್ವೆ ಗೇಟ್ ಬಳಿ ಅಗ್ನಿಶಾಮಕ ವಾಹನ ನಿಯೋಜನೆ: ರೈಲು ಪ್ರಯಾಣಿಸಿದ ಏಳು ಕಿಲೋ ಮೀಟರ್ ದಾರಿ ಮಧ್ಯೆ ಗ್ಯಾಸ್ ಸೋರಿಕೆಯಾದ ಹಿನ್ನೆಲೆಯಲ್ಲಿ ಜೋಕಟ್ಟೆ ಮತ್ತು ಸುತ್ತಮುತ್ತಲಿನ ಭಾಗದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ರೈಲ್ವೆ ಗೇಟ್ ಬಳಿ ಅಗ್ನಿಶಾಮಕ ವಾಹನ ನಿಯೋಜನೆ ಮಾಡಲಾಗಿದ್ದು, ರೈಲ್ವೆ ಹಳಿ ಸುತ್ತಮುತ್ತಲೂ ನಾಗರಿಕರು ಬರದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ. ಘಟನೆಯಿಂದ ಜೋಕಟ್ಟೆ ಪ್ರದೇಶದ ಜನರು ಆತಂಕಗೊಂಡಿದ್ದಾರೆ.
ಕರಾವಳಿ ಜಿಲ್ಲೆಗಳಲ್ಲಿ ಬಿಸಿಗಾಳಿ ಬೀಸುವ ಎಚ್ಚರಿಕೆ ನೀಡಿದ ಹವಮಾನ ಇಲಾಖೆ : ಇನ್ನೊಂದೆಡೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಬಿಸಿಗಾಳಿ ಬೀಸುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದ್ದು, ಇದರಿಂದ ಬೇಸಿಗೆ ಕಾಲದಲ್ಲಿ ರಣಬಿಸಿಲಿಗೆ ಹೈರಾಣಾಗಿದ್ದ ಜನ ಮತ್ತೆ ಆತಂಕಿತರಾಗಿದ್ದಾರೆ. ದಿನಕಳೆದಂತೆ ಮಾನವ ಮರ ಗಿಡಗಳನ್ನು ನಾಶ ಮಾಡಿ ಕಾಂಕ್ರೀಟ್ ಕಾಡು ಬೆಳೆಸುತ್ತಿದ್ದಾನೆ. ಇದರ ಪರಿಣಾಮ ಈ ರೀತಿಯ ತಾಪಮಾನದ ಏರಿಕೆಗೆ ಕಾರಣವಾಗಿದೆ.
ಮಂಗಳೂರಿನಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಾಗುತ್ತಿದೆ. ಸುಡು ಬಿಸಿಲಿನಿಂದಾಗಿ ಜನರಿಗೆ ಹೊರ ಬರುವುದಕ್ಕೂ ಕಷ್ಟಸಾಧ್ಯವಾಗುತ್ತಿದೆ. ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಜನ ಛತ್ರಿಗಳ ಮೊರೆ ಹೋಗುತ್ತಿರುವ ದೃಶ್ಯ ಸಾಮಾನ್ಯವಾಗುತ್ತಿದೆ. ಹೀಗಾಗಿ, ನಗರದ ಅಲ್ಲಲ್ಲಿ ಕಲ್ಲಂಗಡಿ, ಕಬ್ಬಿನ ಹಾಲು, ಎಳನೀರು ಮಾರಾಟದ ಅಂಗಡಿಗಳಲ್ಲಿ ಬಾಯಾರಿಕೆಯ ದಾಹವನ್ನು ಜನರು ತೀರಿಸಿಕೊಳ್ಳುತ್ತಿದ್ದಾರೆ. ಈ ಬಾರಿ ಇರುವ ಸೆಕೆ ಯಾವತ್ತೂ ಇರಲಿಲ್ಲ ಅನ್ನುತ್ತಾರೆ ಜಿಲ್ಲೆಯ ಜನತೆ.
ಇದನ್ನೂ ಓದಿ : ಕೃಷ್ಣ ಮಠ ಜಾಗದ ಮೂಲದ ಬಗ್ಗೆ ನೀಡಿದ ಹೇಳಿಕೆ ವಿವಾದ: ಸ್ಪಷ್ಟೀಕರಣ ನೀಡಿದ ಮಿಥುನ್ ರೈ
ಎರಡು ದಿನಗಳ ಹಿಂದೆಯಷ್ಟೇ ಮಂಗಳೂರಿನಲ್ಲಿ 38. 8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಮೂಲಕ ದೇಶದಲ್ಲಿಯೇ ಅತಿ ಹೆಚ್ಚಿನ ತಾಪಮಾನ ಎನಿಸಿಕೊಂಡಿತ್ತು. ಮಂಗಳೂರಿನಲ್ಲಿ 2017ರಲ್ಲಿ 37.9 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಆದರೆ, ಇದೇ ಮಾರ್ಚ್ 2ರಂದು ದೇಶದಲ್ಲಿಯೇ ಗರಿಷ್ಠ ಎನಿಸಿದ್ದ 37.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಇದಾಗಿ ಒಂದು ವಾರದ ಅಂತರದಲ್ಲಿ ತಾಪಮಾನದಲ್ಲಿ ಭಾರೀ ಏರಿಕೆಗಳು ಕಂಡುಬಂದಿರುವುದನ್ನು ಗಮನಿಸಬಹುದು.
ಇದನ್ನೂ ಓದಿ : ಬಿಸಿಗಾಳಿ ಬೀಸುವ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ: ಬಿಸಿಲ ಬೇಗೆಯಿಂದ ಸುಡುತ್ತಿದೆ ರಾಜ್ಯ ಕರಾವಳಿ