ಮಂಗಳೂರು: ಗಣೇಶೋತ್ಸವಕ್ಕೆ ಸಂಬಂಧಿಸಿದಂತೆ ನಗರಾದ್ಯಂತ ಪೂರ್ಣ ಪ್ರಮಾಣದ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಸರ್ಕಾರದ ಮಾರ್ಗಸೂಚಿಯಂತೆ ಗಣೇಶೋತ್ಸವ ಆಚರಿಸಬೇಕು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಹೇಳಿದರು.
ಕಾನೂನು ಹಾಗೂ ಸುವ್ಯವಸ್ಥೆಗಾಗಿ ಪೊಲೀಸ್ ಇಲಾಖೆಯಿಂದ ಕೆಎಸ್ಆರ್ಪಿ, ಸಿಎಆರ್ ಹಾಗೂ ಆರ್‌ಎಎಫ್ ತಂಡಗಳನ್ನು ನಿಯೋಜನೆ ಮಾಡಲಾಗಿದೆ. ನಗರದ ಉಳ್ಳಾಲ ಮತ್ತು ಸುರತ್ಕಲ್ನ ಪ್ರಮುಖ ರಸ್ತೆಗಳಲ್ಲಿ ರೂಟ್ ಮಾರ್ಚ್ ನಡೆಸಲಾಗಿದೆ ಎಂದು ಹೇಳಿದರು.
ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡಲು ಎಲ್ಲಾ ಸಮುದಾಯದ ಪ್ರಮುಖರೊಂದಿಗೆ ಈಗಾಗಲೇ ಚರ್ಚೆ ನಡೆಸಲಾಗಿದೆ. ಈ ಬಗ್ಗೆ ಯಾವುದೇ ಗೊಂದಲಗಳಿಲ್ಲ. ಈಗಾಗಲೇ ಕಾರ್ಯಕ್ರಮ ಆಯೋಜಕರೊಂದಿಗೂ ನಾವು ಮಾತನಾಡಿದ್ದೇವೆ ಎಂದರು.
ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಎಲ್ಲಾ ಬೀಟ್ ಮಟ್ಟದಿಂದ ಹಿಡಿದು ಸಬ್ ಡಿವಿಷನ್ ಆಫೀಸ್, ಡಿಸಿಪಿ, ವರೆಗೆ ಯಾವುದೇ ರೀತಿಯ ಸಂವಹನ ಕೊರತೆ ಇಲ್ಲ. ಸ್ಥಳೀಯ ಪೊಲೀಸರಿಂದ ಹಿಡಿದು ಡಿಸಿಪಿಯವರ ದೂರವಾಣಿ ಸಂಖ್ಯೆಯನ್ನು ಎಲ್ಲಾ ಕಡೆಗಳಲ್ಲೂ ನೀಡುತ್ತಿದ್ದು, ಯಾವುದೇ ತೊಂದರೆಗಳಾದರೂ ತಕ್ಷಣ ಕರೆ ಮಾಡಬಹುದು ಎಂದು ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಹೇಳಿದರು.