ಸುಳ್ಯ(ದಕ್ಷಿಣ ಕನ್ನಡ): ಕೊರೊನಾ ವೈರಸ್ನಿಂದಾಗಿ ಸರ್ಕಾರ ಲಾಕ್‌ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಕೆಲಸವಿಲ್ಲದೆ ಸಂಕಷ್ಟ ಎದುರಿಸುತ್ತಿರುವವರಿಗೆ ವ್ಯಕ್ತಿಯೊಬ್ಬರು ಅಕ್ಕಿ ವಿತರಿಸುತ್ತಿದ್ದಾರೆ. ಸುಮಾರು 125 ಬಡ ಕುಟುಂಬಗಳನ್ನು ಗುರುತಿಸಿ ಅಗತ್ಯಕ್ಕೆ ತಕ್ಕಂತೆ, ಯಾವುದೇ ಪ್ರಚಾರ ಗಿಟ್ಟಿಸದೆ ನಿತಿನ್ ಕೋಡಿಂಬಾಳ ಎಂಬ ಯುವಕ ಅಕ್ಕಿ ವಿತರಿಸುತ್ತಿದ್ದಾರೆ.
ಸುಳ್ಯ ವಿಧಾನಸಭಾ ಕ್ಷೇತ್ರದ ಕೋಡಿಂಬಾಳ ಗ್ರಾಮದ ದಾಸರಗುಡ್ಡೆ, ಓಂತ್ರಡ್ಕ, ಉಜಿರಡ್ಕ, ಮಡ್ಯಡ್ಕ, ಕೋಲ್ಪೆ, ಗಾಳಿಬೀಡು,ಪಾಜೋವು, ನೆಲ್ಲಿಪಡ್ಪು, ಗಾನದಗುಂಡಿ ಪ್ರದೇಶದ ಬಡ ಕುಟುಂಬಗಳಿಗೆ ತಲಾ 5 ಕೆ.ಜಿಯಂತೆ ಮತ್ತು ಕುಟುಂಬದಲ್ಲಿ ಅಶಕ್ತರು, ವಿಕಲಚೇತನರು, ಅನಾರೋಗ್ಯದಿಂದ ಇರುವವರಿಗೆ ತಲಾ 10 ಕೆ.ಜಿಯಂತೆ ಅಕ್ಕಿ ವಿತರಿಸಿದ್ದಾರೆ.
ಅಕ್ಕಿ ವಿತರಿಸುವ ಸಂದರ್ಭದಲ್ಲಿ ಸ್ವಯಂಸೇವಕರಾಗಿ ನಿತಿನ್ ಗೆಳೆಯರಾದ ದಯಾನಂದ ಉಂಡಿಲ, ವಿಘ್ನೇಶ್ ಕೊಟ್ಟಾರಿ, ರಮೇಶ್ ಕೊಟ್ಟಾರಿ, ಸಂಜಿವ ನಾಯ್ಕ್, ರಘುರಾಮ ನಾಯ್ಕ್, ಮೋಹನ್ ಕೋಡಿಂಬಾಳ, ವಿಠಲ ಶೆಟ್ಟಿ , ರಾಮ ಕಾಸರಗೋಡು ಸಹರಿಸಿದ್ದಾರೆ.
ಅಕ್ಕಿ ಕೊಡುವ ಈ ಕಾರ್ಯ ಯಾವುದೇ ಪ್ರಚಾರಕ್ಕೆ ಅಲ್ಲ. ನಮ್ಮ ಕೋಡಿಂಬಾಳ ಗ್ರಾಮದಲ್ಲಿ ನಿತ್ಯ ದುಡಿದು ತಿನ್ನುವ ಅನೇಕ ಕುಟುಂಬಗಳನ್ನು ನಾನು ಹತ್ತಿರದಿಂದ ನೋಡಿ ಬೆಳೆದವನು. ಇದೀಗ ಸರ್ಕಾರ ಲಾಕ್ ಡೌನ್ ಘೋಷಣೆಯ ಕಾರಣ ಈ ವರ್ಗ ಸಂಕಷ್ಟಕ್ಕೆ ಒಳಗಾಗಿರೋದನ್ನು ನಾನು ಗಮನಿಸಿದ್ದೇನೆ. ಈ ಪರಿಸ್ಥಿತಿ ನೋಡಿಕೊಂಡು ಅಕ್ಕಿ ನೀಡಿದ್ದೇನೆ. ಬೇರೆಯವರು ಕೂಡ ಈ ಸಂದರ್ಭದಲ್ಲಿ ಇಂತಹ ಕಾರ್ಯಕ್ಕೆ ಮುಂದಾಗಬೇಕೆಂದು ಹೇಳಿದರು.