ಮಂಗಳೂರು: ಕೊರೊನಾ ಸೋಂಕಿತ ಬಡವರಿಗೆ ಮೂಡುಬಿದಿರೆ ತಾಲೂಕಿನಿಂದ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಲು ಉಚಿತ ಆ್ಯಂಬುಲೆನ್ಸ್ ವ್ಯವಸ್ಥೆಯಿದ್ದು, ಇದರ ನಿರ್ವಹಣೆಗಾಗಿ ಮಾಜಿ ಸಚಿವ ಅಭಯಚಂದ್ರ ಜೈನ್, ಮೂಡುಬಿದಿರೆ ಸಮಾಜ ಮಂದಿರ ಹಾಗೂ ಬೆಂಗಳೂರಿನ ಉದ್ಯಮಿ ಶ್ರೀಪತಿ ಭಟ್ ತಲಾ 50 ಸಾವಿರ ರೂ.ನಂತೆ ನೀಡಿರುವ ಒಟ್ಟು 1.50 ಲಕ್ಷ ರೂ. ಹಸ್ತಾಂತರಿಸಲಾಯಿತು.
ಇದರ ಜೊತೆಗೆ ಮೂಡುಬಿದಿರೆಯ ಸಿ.ಹೆಚ್ ಮೆಡಿಕಲ್ ಉಚಿತವಾಗಿ ಆ್ಯಂಬುಲೆನ್ಸ್ಗೆ ಆಕ್ಸಿಜನ್ ಸಿಲಿಂಡರ್ ಅಳವಡಿಸಿದೆ. ಈ ಆ್ಯಂಬುಲೆನ್ಸ್ ಅನ್ನು ಮೂಡುಬಿದಿರೆಯ ಶಿರ್ತಾಡಿಯಲ್ಲಿ ಇರಿಸಲಾಗುತ್ತದೆ. ಮುಲ್ಕಿ, ಮೂಡುಬಿದಿರೆ ತಾಲೂಕಿನ ಬಡ ರೋಗಿಗಳಿಗೆ ತುರ್ತು ಸಂದರ್ಭದಲ್ಲಿ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಲು ಉಚಿತವಾಗಿ ಆ್ಯಂಬುಲೆನ್ಸ್ ಸೇವೆ ಪಡೆದುಕೊಳ್ಳಬಹುದು.
ಇದನ್ನೂ ಓದಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆಯಿಲ್ಲ: ಸಚಿವ ಕೋಟ ಸ್ಪಷ್ಟನೆ
ಈ ಬಗ್ಗೆ ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ಬಡ ರೋಗಿಗಳಿಗೆ ಉಚಿತವಾಗಿ ಈ ಆಕ್ಸಿಜನ್ ಸಿಲಿಂಡರ್ ಇರುವ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಇದರ ನಿರ್ವಹಣೆಗೆ ನಾನು ವೈಯಕ್ತಿಕವಾಗಿ 50 ಸಾವಿರ ರೂ. ನೀಡಿದ್ದೇನೆ. ಜೊತೆಗೆ ಮೂಡುಬಿದಿರೆ ಸಮಾಜ ಮಂದಿರ ಹಾಗೂ ಬೆಂಗಳೂರಿನ ಉದ್ಯಮಿ ಶ್ರೀಪತಿ ಭಟ್ ಅವರು ಕೂಡಾ ತಲಾ 50 ಸಾವಿರ ರೂ. ನೀಡುವುದರೊಂದಿಗೆ 1.50 ಲಕ್ಷ ರೂ. ಹಣವನ್ನು ಆ್ಯಂಬುಲೆನ್ಸ್ ನಿರ್ವಹಣೆಗೆ ಮೀಸಲಿರಿಸಲಾಗಿದೆ. ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆಯನ್ನು ಸಿ.ಎಚ್ ಮೆಡಿಕಲ್ ಉಚಿತವಾಗಿ ನೀಡಿದ್ದು, ಬಡವರು ಇದರ ಸದುಪಯೋಗ ಪಡೆಯಬಹುದು. ಅಗತ್ಯ ಇದ್ದವರು ಮೂಡುಬಿದಿರೆ ಕಾಂಗ್ರೆಸ್ ಕಚೇರಿಯ ಸಹಾಯವಾಣಿಗೆ ಕರೆ ಮಾಡಿದ್ದಲ್ಲಿ ತಕ್ಷಣ ಸೇವೆ ಒದಗಿಸಲಾಗುತ್ತದೆ. ಸದ್ಯದಲ್ಲಿಯೇ ಮುಲ್ಕಿ - ಮೂಡುಬಿದಿರೆ ಕ್ಷೇತ್ರಕ್ಕೆ ಇನ್ನು ಮೂರು ಇದೇ ರೀತಿಯ ಉಚಿತ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡುವ ಚಿಂತನೆ ಇದೆ ಎಂದು ಹೇಳಿದರು.