ಮಂಗಳೂರು: ಮಂಗಳೂರಿನ ಧಕ್ಕೆ ಅಳಿವೆಬಾಗಿಲಿನಲ್ಲಿ ನಡೆದ ಬೋಟ್ ದುರಂತದಲ್ಲಿ ನಾಪತ್ತೆಯಾದ ನಾಲ್ವರು ಮೀನುಗಾರರು ಇನ್ನೂ ಪತ್ತೆಯಾಗಿಲ್ಲ. ರಾತ್ರಿಯಾದ ಕಾರಣ ಶೋಧಕಾರ್ಯವನ್ನು ನಾಳೆಗೆ ಮುಂದೂಡಿದ್ದಾರೆ.
ಶ್ರೀರಕ್ಷಾ ಎಂಬ ಬೋಟ್ ನಿನ್ನೆ ರಾತ್ರಿ ಮೀನು ಹಿಡಿದುಕೊಂಡು ಧಕ್ಕೆಗೆ ವಾಪಸ್ ಬರುವಾಗ ದುರಂತ ಸಂಭವಿಸಿತ್ತು. ಈ ಬೋಟ್ನಲ್ಲಿದ್ದ 22 ಮೀನುಗಾರರಲ್ಲಿ 16 ಮಂದಿಯನ್ನು ರಕ್ಷಣೆ ಮಾಡಲಾಗಿತ್ತು. ಇನ್ನೂ ಆರು ಮಂದಿ ನಾಪತ್ತೆಯಾಗಿದ್ದರು. ಕೋಸ್ಟ್ ಗಾರ್ಡ್, ಇತರ ಹಡಗಿನ ಮೀನುಗಾರರು ಮತ್ತು ಮುಳುಗುತಜ್ಞರು ಶೋಧ ಕಾರ್ಯ ನಡೆಸಿದ್ದು ಇಂದು ಪಾಂಡುರಂಗ ಸುವರ್ಣ ಮತ್ತು ಪ್ರೀತಂ ಎಂಬುವರ ಮೃತದೇಹ ಪತ್ತೆಯಾಗಿದೆ.
ಇದನ್ನೂ ಓದಿ.. ಮಂಗಳೂರು: ಪರ್ಷಿಯನ್ ಬೋಟ್ ಮುಳುಗಡೆ, 6 ಮೀನುಗಾರರು ನಾಪತ್ತೆ
ಚಿಂತನ್, ಝಿಯಾವುಲ್ಲಾ, ಅನ್ಸಾರ್, ಹಸೈನಾರ್ ಎಂಬ ನಾಲ್ವರು ಮೀನುಗಾರರು ಸಮುದ್ರದೊಳಗೆ ಬೋಟ್ನ ಒಳಭಾಗದಲ್ಲಿ ಸಿಲುಕಿಕೊಂಡಿದ್ದು ಇವರ ಪತ್ತೆ ಇಂದು ಸಾಧ್ಯವಾಗಿಲ್ಲ. ರಾತ್ರಿಯಾದ ಕಾರಣ ಶೋಧ ಕಾರ್ಯ ಸ್ಥಗಿತಗೊಳಿಸಲಾಗಿದ್ದು ನಾಳೆ ಬೆಳಿಗ್ಗೆಯಿಂದ ಮತ್ತೆ ಕಾರ್ಯಾಚರಣೆ ಆರಂಭವಾಗಲಿದೆ. ನಾಳೆ ಘಟನಾಸ್ಥಳಕ್ಕೆ 50ಕ್ಕೂ ಅಧಿಕ ಪರ್ಸಿನ್ ಬೋಟ್ಗಳು ತೆರಳಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಳ್ಳಲಿದೆ.